ಉಡುಪಿ : ಮಲ್ಪೆ ಬಂದರು ವ್ಯಾಪ್ತಿಯ ಸುಮಾರು 37,554.55 ಚದರ ಮೀಟರ್ (ಸುಮಾರು 9.50 ಎಕರೆ) ಭೂಮಿಯನ್ನು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ಗೆ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವುದನ್ನು ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಖಂಡಿಸಿದ್ದಾರೆ.

ಕರ್ನಾಟಕ ಜಲ ಸಾರಿಗೆ ಮಂಡಳಿಯ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಈ ಗುತ್ತಿಗೆಯ ಮಂಜೂರಾತಿ ನೀಡಿದ ಹಿನ್ನೆಲೆಯಲ್ಲಿ, ಭಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂಮಿ ಟೆಬ್ಮಾ ಶಿಪ್‌ಯಾರ್ಡ್ ಹಿಂದಿನ ಸಿವಾಕ್ ಪ್ರದೇಶದಲ್ಲಿದ್ದು, ಹನುಮಾನ್ ವಿಠೋಬ ಭಜನಾ ಮಂದಿರ ಮತ್ತು ಅಯ್ಯಪ್ಪ ಭಜನಾ ಮಂದಿರಗಳ ಸಮೀಪದಲ್ಲಿದೆ.

ಈ ಜಾಗವನ್ನು ಮೀನುಗಾರಿಕಾ ಗುತ್ತಿಗೆಯ ಹೆಸರಿನಲ್ಲಿ ಫೆಡರೇಶನ್‌ಗೆ ನೀಡಿರುವುದು ಸ್ಥಳೀಯ ಹಿತಾಸಕ್ತಿಗೆ ವಿರುದ್ಧವಾಗಿದೆ. ಬದಲಿಗೆ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ನೀಡಬೇಕಿತ್ತು. ಭೂಮಿಯನ್ನು ಮಲ್ಪೆಯ ಐದು ಭಜನಾ ಮಂಡಳಿಗಳನ್ನು ಒಳಗೊಂಡ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಗೆ ನೀಡಬೇಕಿತ್ತು. ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡದ ಕಾಂಗ್ರೆಸ್ ಸರ್ಕಾರ, ಶಾಸಕರು ಅಧ್ಯಕ್ಷರಾಗಿರುವ ಫೆಡರೇಶನ್‌ಗೆ ಗುತ್ತಿಗೆ ಮಂಜೂರು ಮಾಡುವುದೇ ಹೇಗೆ? ಶಾಸಕರ ಸ್ವಹಿತಾಸಕ್ತಿಯ ಕೆಲಸಕ್ಕೆ ಕಾಂಗ್ರೆಸ್ ಜೊತೆ ಒಳ ಒಪ್ಪಂದ ನಡೆದಿದೆಯೇ? ಎಂದು ಭಟ್ ಪ್ರಶ್ನಿಸಿದ್ದಾರೆ.

ಮುಂದಿನ ಹೋರಾಟಕ್ಕೆ ಸೂಚನೆ ನೀಡಿದ ರಘಪತಿ ಭಟ್ ಅವರು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ಮಲ್ಪೆ ಹಾಗೂ ಉಡುಪಿ ಪ್ರದೇಶಗಳಲ್ಲಿ ಸಾರ್ವಜನಿಕ ಹೋರಾಟಗಳು ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.



