Friday, March 6, 2026

spot_img

ಮಲ್ಪೆ ಬಂದರು ಭೂಮಿ ಅಕ್ರಮ ಗುತ್ತಿಗೆ ಆರೋಪ : ಶಾಸಕ ಯಶ್ಪಾಲ್ ಸುವರ್ಣರ ಮನೆಗೆ ಸಾರ್ವಜನಿಕರ ಮುತ್ತಿಗೆ !?

ಉಡುಪಿ: ಮಲ್ಪೆ ಕಡಲತೀರದ ಸುಮಾರು ಎಂಟು ಎಕರೆ ಸರ್ಕಾರೀ ಬಂದರು ಭೂಮಿಯನ್ನು ಅಕ್ರಮವಾಗಿ ಗುತ್ತಿಗೆ ಪಡೆದಿರುವ ಆರೋಪ ಹೊರಬಿದ್ದ ಹಿನ್ನೆಲೆ, ಉಡುಪಿಯಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರಕಟವಾದ ಒಪ್ಪಿಗೆ ಪತ್ರ ಸಾರ್ವಜನಿಕರ ಕೈಗೆ ಸಿಕ್ಕಿದಂತೆಯೇ, ನೂರಾರು ಮಂದಿ ಶುಕ್ರವಾರ ಸಂಜೆ ಶಾಸಕ ಯಶ್ಪಾಲ್ ಸುವರ್ಣ ಅವರ ನಿವಾಸದ ಬಳಿ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಜಲಸಾರಿಗೆ ಮಂಡಳಿ ನೀಡಿರುವ ಒಪ್ಪಿಗೆ ಪತ್ರದ ಪ್ರಕಾರ, 2025ರ ಏಪ್ರಿಲ್ 23ರಂದು ಮುಖ್ಯಮಂತ್ರಿಗಳು ಹಾಗೂ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಲ್ಪೆ ಬಂದರು ವ್ಯಾಪ್ತಿಯ 37,554.55 ಚದರ ಮೀಟರ್ (ಅಂದಾಜು ಎಂಟು ಎಕರೆ) ಭೂಮಿಯನ್ನು 15 ವರ್ಷ ಅವಧಿಗೆ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿಯಮಿತಕ್ಕೆ ನೀಡಲು ಅನುಮೋದನೆ ನೀಡಲಾಗಿದೆ. ಈ ಫೆಡರೇಷನ್ ಅಧ್ಯಕ್ಷರಾಗಿರುವುದು ಶಾಸಕ ಯಶ್ಪಾಲ್ ಸುವರ್ಣ ಎಂಬ ಸಂಗತಿ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.  ಪ್ರತಿ ಚದರ ಮೀಟರ್‌ಗೆ 231 ರೂಪಾಯಿ ರಂತೆ ಮಾಸಿಕ ದರ ನಿಗದಿ ಮಾಡಿ ಗುತ್ತಿಗೆ ಒಪ್ಪಂದಕ್ಕೆ ಸೂಚನೆ ನೀಡಿರುವುದೂ ಪತ್ರದಲ್ಲಿ ತಿಳಿಸಲಾಗಿದೆ.

ಸ್ಥಳೀಯರ ಪ್ರಕಾರ, ಗುತ್ತಿಗೆಗೆ ಒಳಪಡುವ ಪ್ರದೇಶ, ಕಳೆದ ಕೆಲ ವರ್ಷಗಳ ಹಿಂದೆ ಮಾಜಿ ಶಾಸಕ ರಘುಪತಿ ಭಟ್‌ ಅವರ ನೇತೃತ್ವದಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿ ರೂಪಾಂತರಗೊಂಡಿತ್ತು. ಮಕ್ಕಳ ಆಟದ ಮೈದಾನ, ಪ್ರವಾಸಿಗರಿಗಾಗಿ ಬೆಂಚುಗಳು ಹಾಗೂ ಸಾರ್ವಜನಿಕ ವೇದಿಕೆ ನಿರ್ಮಿಸಲ್ಪಟ್ಟಿದ್ದವು. ಭಜನಾ ಮಂದಿರದ ಸಾನ್ನಿಧ್ಯ ಮತ್ತು ಸ್ಥಳೀಯರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿತ್ತು ಇದರ ಮಧ್ಯೆ ಸಾರ್ವಜನಿಕರ ಗಮನಕ್ಕೆ ತಾರದೆ ಗುತ್ತಿಗೆ ಪತ್ರ ಹೊರಬಿದ್ದಿರುವುದು ಅಕ್ರಮ ಎಂದು ಸ್ಥಳೀಯ ಮುಖಂಡ ಧನಂಜಯ ಕಾಂಚನ್ ಆರೋಪಿಸಿದ್ದಾರೆ.

ಆರೋಪಗಳ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಸಾರ್ವಜನಿಕರು ಶಾಸಕರ ನಿವಾಸದ ಮುಂದೆ ಮುತ್ತಿಗೆ ಹಾಕಿ ತೀವ್ರವಾಗಿ ಪ್ರತಿಭಟನೆ ನಡೆಸಿದರು. ಶಾಸಕರಿಂದ ಸ್ಪಷ್ಟನೆ ಕೇಳಿದ ಸ್ಥಳಿಯರು, ಇನ್ಯಾವತ್ತೂ ನಿಮ್ಮ ಬಳಿ ಬರುವುದಿಲ್ಲ, ನಿಮಗೆ ಬೆಂಬಲವಿಲ್ಲ ಎಚ್ಚರಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಶಾಸಕರು ಸಾರ್ವಜನಿಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿ, ಜನರಿಗೆ ಇಷ್ಟವಿಲ್ಲದಿದ್ದರೆ ಒಪ್ಪಿಗೆ ಪತ್ರವನ್ನು ರದ್ದುಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಒಪ್ಪಿಗೆ ಪತ್ರ ನಿಜಕ್ಕೂ ರದ್ದಾಗುತ್ತದೆಯೇ?  ಶಾಸಕರ ಹೇಳಿಕೆಯಿಂದ ಕ್ಷಣಿಕ ಶಾಂತಿ ಕಂಡುಬಂದರೂ, ಗುತ್ತಿಗೆ ರದ್ದುಗೊಳಿಸುವ ಬಗ್ಗೆ ಅಧಿಕೃತ ಕ್ರಮ ಕೈಗೊಳ್ಳಲಾಗುತ್ತದೆಯೇ? ಜಲಸಾರಿಗೆ ಮಂಡಳಿ ಈ ಬಗ್ಗೆ ಹೊಸ ಆದೇಶ ಹೊರಡಿಸುತ್ತದೆಯೇ? ಸ್ಥಳೀಯರ ಬೇಡಿಕೆಗಳಿಗೆ ಸರ್ಕಾರ ಏನು ಸ್ಪಂದಿಸುತ್ತದೆ? ಎಂಬ ಪ್ರಶ್ನೆಗಳು ಹಾಗೇಯೇ ಮುಂದುವರಿದಿದೆ. ಮಲ್ಪೆಯ ಈ ಬೆಳವಣಿಗೆ ಉಡುಪಿಯಲ್ಲಿ ಹೊಸ ರಾಜಕೀಯ ಸಮೀಕರಣಗಳನ್ನು ಹುಟ್ಟುಹಾಕುವ ಸೂಚನೆ ನೀಡಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles