ಉಡುಪಿ : ತಾಲೂಕಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋಕಳ್ಳತನ ಮತ್ತು ಅಕ್ರಮ ಕಸಾಯಿಖಾನೆಗಳ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರಮುಖರು ತಹಶೀಲ್ದಾರ್ ಪ್ರದೀಪ್ ಆರ್. ಹಾಗೂ ಎಎಸ್‌ಪಿ ಡಾ. ಹರ್ಷ ಪ್ರಿಯಂವದ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿ, ಇತ್ತೀಚೆಗೆ ಶಿರ್ಲಾಲು ಗ್ರಾಮದಲ್ಲಿ ಹೈನುಗಾರಿಕೆ ನಡೆಸುತ್ತಿದ್ದ ಮಹಿಳೆಯ ಮನೆಗೆ ದಾಳಿ ನಡೆಸಿ, ಮಾರಕಾಸ್ತ್ರ ತೋರಿಸಿ ದನಗಳನ್ನು ಕದ್ದುಕೊಂಡು ಹೋಗಿದ್ದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆ ಘಟನೆ ಮಾಸುವ ಮುನ್ನವೇ ನಲ್ಲೂರಿನ ಅಶ್ರಫ್ ಅವರ ತೋಟದಲ್ಲಿ ಅಕ್ರಮ ಕಸಾಯಿಖಾನೆ ನಡೆಸಿ ದನ ಕಡಿತ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು. ದುಷ್ಕರ್ಮಿಗಳು ಕಾನೂನು ಮತ್ತು ಪೊಲೀಸರ ಭಯವಿಲ್ಲದೇ ದನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದಾರೆ. ಇಂತಹ ತಂಡಗಳು ತಾಲೂಕಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಕಳದ ಶಾಂತಿಗೆ ಧಕ್ಕೆಯುಂಟು ಮಾಡುತ್ತಿವೆ. ಅಕ್ರಮ ಕಸಾಯಿಖಾನೆಗಳು, ಗೋಕಳ್ಳರು ಹಾಗೂ ಮಾಂಸ ಮಾರಾಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಂಘಟನೆಗಳು ತೀವ್ರ ಹೋರಾಟ ಆರಂಭಿಸಲಿವೆ ಎಂದು ಹಿಂದೂ ಸಂಘಟನೆ ಪ್ರಮುಖರು ಹೇಳಿದರು

ಈ ಸಂದರ್ಭದಲ್ಲಿ ಸುನಿಲ್ ಕೆ.ಆರ್., ಸುಧೀರ್ ನಿಟ್ಟೆ, ಚೇತನ್ ಪೇರಲ್ಕೆ, ರತ್ನಾಕರ್ ಅಮೀನ್, ರಮೇಶ್ ಕಲ್ಲೊಟ್ಟೆ, ಸುಜಿತ್ ಸಫಲಿಗ, ರಾಘವೇಂದ್ರ ಕುಲಾಲ್, ಪ್ರಸಾದ್, ಯಶೋಧರ್, ಶರತ್, ಗುರುಪ್ರಸಾದ್ ಸೂಡ ಮತ್ತು ಹರೀಶ್ ಬಜಗೋಳಿ, ಮನೋಜ್, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



