Friday, March 6, 2026

spot_img

ತನಗಿಂತ ತನ್ನ ದೇಶ ಮೊದಲೆಂದು ಬದುಕಿದ ಒನಕೆ ಓಬವ್ವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಸಂಸದ ಕೋಟ

ಉಡುಪಿ: ಒನಕೆ ಓಬವ್ವ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರಾಜ್ಯ ಮತ್ತು ದೇಶದ ರಕ್ಷಣೆಗೆ ನಿಂತ ವೀರ ಮಹಿಳೆ. ಅವರ ತ್ಯಾಗ, ದೇಶಪ್ರೇಮ ಮತ್ತು ಸ್ವಾಮಿನಿಷ್ಠೆ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 ಅವರು ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಚಿತ್ರದುರ್ಗದ ಕೋಟೆಯ ಕಲ್ಲುಗಳನ್ನು ನೋಡಿದಾಗಲೇ ಓಬವ್ವನ ಸ್ಮರಣೆ ಆಗುತ್ತದೆ. ಆಕೆ ಆತ್ಮರಕ್ಷಣೆಯ ಸಂಕೇತ. ಮಹಿಳೆಯರು ತಮ್ಮ ಪ್ರಾಂತ್ಯ, ರಾಜ್ಯ, ದೇಶದ ರಕ್ಷಣೆಗೆ ಬೇಕಾದರೆ ಪ್ರಾಣವನ್ನೂ ತ್ಯಜಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಕ್ಕೆ ಓಬವ್ವ ಜೀವಂತ ಉದಾಹರಣೆ. ಸರ್ಕಾರವು ಓಬವ್ವ ಜಯಂತಿಯನ್ನು ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವನೆ ಬೆಳೆಸುತ್ತಿದೆ ಎಂಬುದು ಸಂತೋಷದ ವಿಚಾರ ಎಂದರು.

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಕುತಂತ್ರದಿಂದ ಚಿತ್ರದುರ್ಗ ಕೋಟೆಗೆ ನುಗ್ಗಿದ ಹೈದರಾಲಿಯ ಸೇನೆಗೆ ಎದುರಾಗಿ ಓಬವ್ವ ತೋರಿಸಿದ ಸಾಹಸ ಇಂದಿಗೂ ಸ್ಮರಣೀಯ. ಅವರು ಮಹಿಳಾ ಶಕ್ತಿಯ ಸಂಕೇತ. ಅವರ ಧೈರ್ಯ ಮತ್ತು ದೇಶಪ್ರೇಮ ಮಹಿಳೆಯರಿಗೆ ಶಾಶ್ವತ ಸ್ಫೂರ್ತಿಯಾಗಿವೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಅವರು ಓಬವ್ವನ ಜೀವನ ಮತ್ತು ಸಾಹಸ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಕೋಶದ ಸುಬ್ರಮಣ್ಯ ಶೆಟ್ಟಿ, ಮಣಿಪಾಲ ಹೈಸ್ಕೂಲ್ ಟ್ರಸ್ಟ್ ಮತ್ತು ಕಾಲೇಜಿನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಉಪಪ್ರಾಂಶುಪಾಲ ನಾಗೇಂದ್ರ ಪೈ, ಹಾಗೂ ಹಲವು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ವರ್ಷಾ ನಿರೂಪಿಸಿದರು, ಸಚ್ಚಿದಾನಂದ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles