ಉಡುಪಿ : ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನಾಚರಣೆಯ ಅಂಗವಾಗಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರ್ಕಾರ, ಜಿಲ್ಲಾಡಳಿತ, ಮೈ ಭಾರತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಹಾಗೂ ಎನ್‌ಎಸ್‌ಎಸ್., ಎನ್‌ಸಿಸಿ., ರೇಂಜರ್ ರೋವರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಮತ್ತು ಏಕತಾ ನಡಿಗೆ ಉಡುಪಿಯಲ್ಲಿ ಆಯೋಜಿಸಲಾಯಿತು.

ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಪ್ರಾರಂಭವಾದ ಈ ಏಕತಾ ನಡಿಗೆಯನ್ನು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಉಪಪ್ರಧಾನಿ ಮತ್ತು ಗೃಹಮಂತ್ರಿಯಾಗಿ ಸಲ್ಲಿಸಿದ ಸೇವೆ ಇಂದಿಗೂ ಪ್ರಸ್ತುತವಾಗಿದೆ. ರಾಜ–ಮಹಾರಾಜರನ್ನು ಒಗ್ಗೂಡಿಸಿ, ಒಡೆದುಹೋಗಿದ್ದ ದೇಶವನ್ನು ಏಕೀಕರಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ. ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಪಟೇಲರ ಕನಸ್ಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ಟಿಕಲ್ 370 ರದ್ದುಪಡಿಸುವ ಮೂಲಕ ನನಸು ಮಾಡಿದ್ದಾರೆ. ಜಾತಿ–ಧರ್ಮ–ವರ್ಗ ಬೇಧ ಮೀರಿಸಿ ದೇಶದ ಏಕತೆ, ಅಭಿವೃದ್ದಿ ಹಾಗೂ ಸಮಗ್ರತೆಯ ಸಂದೇಶ ಸಾರಲು ಈ ಏಕತಾ ನಡಿಗೆಯು ಉದ್ದೇಶಿಸಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಸರ್ದಾರ್ ಪಟೇಲರ ಜೀವನಚರಿತ್ರೆ ಹಾಗೂ ಅವರ ದೇಶಭಕ್ತಿ ಕುರಿತು ಸಣ್ಣ ನಾಟಕ, ಗೀತ ಮತ್ತು ಭಾಷಣಗಳನ್ನೂ ಪ್ರಸ್ತುತಪಡಿಸಿದರು. ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ್ ಅವರು ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆ ಪ್ರತಿಜ್ಞಾವಿಧಿಯನ್ನು ಪಾಲ್ಗೊಂಡ ಎಲ್ಲರಿಗೂ ಭೋಧಿಸಿದರು.

ಈ ನಡಿಗೆಯಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡಗಿ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ್, ರೆಡ್ ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರ್, ಬಿಜೆಪಿ ಮಂಗಳೂರು ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು, ಎನ್ ಎಸ್ ಎಸ್, ಎನ್ ಸಿಸಿ, ರೇಂಜರ್ ರೋವರ್ಸ್ ಘಟಕದ ಸ್ವಯಂಸೇವಕರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.



