ಉಡುಪಿ: ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಸಾಲ ಪಡೆದು ವಂಚನೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖೆಯ ಶಾಖಾ ವ್ಯವಸ್ಥಾಪಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಪುನೀತ್ ಆನಂದ ಕೋಟ್ಯಾನ್(ಕಪ್ಪೆಟ್ಟು, ಅಂಬಲಪಾಡಿ), ಸುದೀಪ್ (ಲಕ್ಷ್ಮೀನಗರ, ತೆಂಕನಿಡಿಯೂರು), ರಂಜನ್ ಕುಮಾರ್ (ಏಣಗುಡ್ಡೆ, ಕಟಪಾಡಿ, ಕಾಪು), ಸರ್ವಜೀತ್ ಹೆಚ್.ಕೆ. (ಅಲಂಗಾರು, ಪೆರ್ಡೂರು), ರಾಜೇಶ್ ದೀಲೀಪ್ ಪಾಟೇಲ್ (ಶ್ರೀನಗರ, ಪುಣೆ, ಮಹಾರಾಷ್ಟ್ರ) ಬಂಧಿತರು.

ಆರೋಪಿಗಳು ಲೇಸರ್ ಯಂತ್ರ ಮತ್ತು ಕಂಪ್ಯೂಟರ್ ಬಳಸಿ ನಕಲಿ ಹಾಲ್‌ಮಾರ್ಕ್ ಮುದ್ರೆ ಹಾಕಿ ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖೆಯಲ್ಲಿ ಚಿನ್ನ ಅಡಮಾನವಾಗಿ ಇರಿಸಿದ್ದರು. ಈ ಕುರಿತು ಬ್ಯಾಂಕ್ ಶಾಖಾ ವ್ಯವಸ್ಥಾಪಕರು ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ಕೈಗೆತ್ತಿಕೊಂಡ ಪೊಲೀಸ್ ರು ತನಿಖೆ ನಡೆಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬೆಂಗಳೂರು, ಗೋವಾ, ಮುಂಬೈ ಮತ್ತು ದೆಹಲಿಯಿಂದ ಬಂಧಿಸಿ, ಅವರ ವಶದಿಂದ 4,30,000 ರೂಪಾಯಿ ನಗದು, ನಕಲಿ ಹಾಲ್‌ಮಾರ್ಕ್ ಅಳವಡಿಸಲು ಬಳಸಿದ್ದ ಲೇಸರ್ ಯಂತ್ರ ಮತ್ತು ಕಂಪ್ಯೂಟರ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ನಕಲಿ ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್ ಗುರುತು ಅಳವಡಿಸಿ ಬ್ಯಾಂಕ್ ಅಧಿಕಾರಿಗಳನ್ನು ಮೋಸಗೊಳಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ವಿಚಾರಣೆಯ ವೇಳೆ ಆರೋಪಿಗಳು ಬ್ರಹ್ಮಾವರ, ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ನಕಲಿ ಚಿನ್ನಾಭರಣ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ನೀಡಿದೆ. ಈ ಕುರಿರು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.



