ಉಡುಪಿ : ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ನವೆಂಬರ್ 11ರಂದು ಉಡುಪಿಯಲ್ಲಿ ಏಕತಾ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅದರ ಪೂರ್ವಭಾವಿ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ, ಗೌರವಯುತವಾಗಿ ಆಯೋಜಿಸುವಂತೆ ಸೂಚಿಸಿದರು.

ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಏಕತಾ ನಡಿಗೆ ಕಾರ್ಯಕ್ರಮವು ರಾಷ್ಟ್ರದ ಏಕತೆ ಮತ್ತು ಅಖಂಡತೆಗೆ ಸಂಕೇತವಾಗಿದ್ದು, ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಸ್ತಿನಿಂದ ನಡೆಯಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸೇವಾ ಸಂಘಟನೆಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಬೇಕು. ಕಾರ್ಯಕ್ರಮವು ನವೆಂಬರ್ 11 ರಂದು ಬೆಳಿಗ್ಗೆ 7.30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಆರಂಭವಾಗಿ ಅಜ್ಜರಕಾಡು ಭುಜಂಗ ಪಾರ್ಕ್‌ನ ಹುತಾತ್ಮರ ಯುದ್ಧ ಸ್ಮಾರಕದವರೆಗೆ ನಡೆಯಲಿದೆ. ಸಮಾರೋಪ ಸ್ಥಳದಲ್ಲಿ ಸರ್ದಾರ್ ಪಟೇಲ್ ಅವರ ಜೀವನ ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮವೂ ಏರ್ಪಡಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕ ಮಾರುತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಕಾರ್ಯಕ್ರಮ ಸಂಯೋಜಕ ಉಲ್ಲಾಸ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.



