ಉಡುಪಿ : ಕುಂದಾಪುರ ತಾಲೂಕಿನ ಬೀಜಾಡಿಯ ಸೀತಾಲಕ್ಷ್ಮಿ ಮತ್ತು ಬಿ.ಎಂ. ರಾಮಕೃಷ್ಣ ಹತ್ವಾರ್ ಸರಕಾರಿ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ ತನ್ನ ಸಾಮಾಜಿಕ ಬದ್ಧತಾ ನಿಧಿ (ಸಿಆರ್ ಎಸ್ ಫಂಡ್) ಯಿಂದ ರೂ. 19 ಲಕ್ಷ ವೆಚ್ಚದಲ್ಲಿ 15 ಆಸನ ಸಾಮರ್ಥ್ಯದ ಶಾಲಾ ಬಸ್ಸನ್ನು ಮಂಜೂರು ಮಾಡಿದ್ದು, ಇಂದು ಉಡುಪಿಯ ಪ್ರಾದೇಶಿಕ ಕಚೇರಿಯಲ್ಲಿ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಬ್ಯಾಂಕಿನ ಆಡಳಿತ ನಿರ್ದೇಶಕರಾದ ಶ್ರೀ ಎಂ. ರಾಘವೇಂದ್ರ ಭಟ್ ಅವರು ಶಾಲೆಗೆ ವಾಹನ ಹಸ್ತಾಂತರಿಸಿ ಮಾತನಾಡುತ್ತಾ, ಕರ್ಣಾಟಕ ಬ್ಯಾಂಕ್ ಕರಾವಳಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದ ಸಂಸ್ಥೆಯಾಗಿದ್ದು, ಈ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸದಾ ಆದ್ಯತೆ ನೀಡುತ್ತ ಬಂದಿದೆ. ಈ ಕೊಡುಗೆಯಿಂದ ಶಾಲಾ ಮಕ್ಕಳಿಗೆ ಪ್ರಯಾಣ ಸುಲಭವಾಗಲಿದೆ ಎಂದು ವಿಶ್ವಾಸವಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿ.ಬಿ.ಒ. ಚಂದ್ರಶೇಖರ ಮಯ್ಯ, ಜಿ.ಎಂ. ರಘುರಾಮ ಎಚ್.ಎಸ್., ಪ್ರಾದೇಶಿಕ ಮುಖ್ಯಸ್ಥ ರಮೇಶ್ ವೈದ್ಯ, ಡಿ.ಆರ್.ಎಚ್. ಸುಬ್ರಹ್ಮಣ್ಯ ಬಾರ್ವೆ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶೇಖರ್ ಛತ್ರಬೆಟ್ಟು, ಪಂಚಾಯತ್ ಸದಸ್ಯ ಅನಿಲ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿನೋದ ಎಂ. ಅವರು ಕರ್ಣಾಟಕ ಬ್ಯಾಂಕ್‌ನ ಈ ಉದಾರ ಕೊಡುಗೆಗೆ ಧನ್ಯವಾದ ಅರ್ಪಿಸಿದರು.



