ಉಡುಪಿ : ಭಾರತ ಕ್ರಿಕೆಟ್ ತಂಡದ ಟಿ–20 ನಾಯಕ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಯಾದವ್ ಅವರು ಉಡುಪಿ ಜಿಲ್ಲೆಯ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟಿ–20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಗೈರುಹಾಜರಿಯಲ್ಲಿ, ಪತ್ನಿ ದೇವಿಶಾ ದೇವಸ್ಥಾನಕ್ಕೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ಪೂಜೆ ಸಲ್ಲಿಸಿದರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದ ನೀಡಿ ಆಶೀರ್ವದಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ದೇವಿಶಾ ಅವರಿಗೆ ಗೌರವ ಸಲ್ಲಿಸಲಾಯಿತು.

ಕಾಪು ಶ್ರೀ ಹೊಸ ಮಾರಿಗುಡಿಯ ಪ್ರಾಂಗಣದಲ್ಲಿರುವ ಬೃಹತ್ ಕಲ್ಲಿನ ಕಂಬವನ್ನು ಸೂರ್ಯಕುಮಾರ್ ಯಾದವ್ ದಂಪತಿ ಸೇವೆಯ ರೂಪದಲ್ಲಿ ಕೊಡುಗೆಯಾಗಿ ನೀಡಿದ್ದು, ದೇವಿಶಾ ಆ ಕಂಬದ ಎದುರು ನಿಂತು ಸ್ಮರಣಾರ್ಥವಾಗಿ ಛಾಯಾಚಿತ್ರ ತೆಗಿಸಿಕೊಂಡರು.

ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾದವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



