ಬೈಂದೂರು: ವೈಯಕ್ತಿಕ ಕಾರಣಗಳಿಂದ ಮನನೊಂದು ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಾವುಂದದಲ್ಲಿ ನಡೆದಿದೆ. ನಾವುಂದ ಗ್ರಾಮದ ದಯಾನಂದ ಜೋಗಿ ಅವರ ಪುತ್ರ ಸ್ಕಂದ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶನಿವಾರ ಸಂಜೆ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಫ್ಯಾನಿಗೆ ಚೂಡಿದಾರದ ಶಾಲು ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡಿದ್ದ ಸ್ಕಂದನನ್ನು ಮನೆಯವರು ತಕ್ಷಣ ಕುಂದಾಪುರದ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದರು, ಆದರೆ ದಾರಿಯಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸ್ಕಂದ ಎಸೆಸೆಲ್ಸಿವರೆಗೆ ಹುಟ್ಟೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರು ನಗರದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದರು. ಅವರು ಚಿಕ್ಕಮ್ಮನ ಮನೆಯಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದ ಎನ್ನಲಾಗಿದೆ. ದೀಪಾವಳಿಯ ರಜೆಗೆ ಮನೆಗೆ ಬಂದಿದ್ದ ಸ್ಕಂದ, ರಜೆ ಮುಗಿದರೂ ಬೆಂಗಳೂರಿಗೆ ಹೋಗಲು ಮನಸ್ಸು ಮಾಡಿರಲಿಲ್ಲ. ಬೆಂಗಳೂರಿನಲ್ಲಿ ಕಲಿಯಲು ಇಷ್ಟವಿಲ್ಲದ ಕಾರಣ ಮನೆಯವರಲ್ಲಿ ನಿರಾಕರಿಸುತ್ತ ದಿನ ಕಳೆದಿದ್ದ ಎನ್ನಲಾಗಿದೆ, ಹೀಗಾಗಿ ಹಲವು ಬಾರಿ ಬೆಂಗಳೂರಿಗೆ ತೆರಳುವ ಬಸ್ ಟಿಕೆಟ್ನ್ನು ರದ್ದು ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


