ಉಡುಪಿ : ತೆಂಕು ತಿಟ್ಟನ ಶ್ರೇಷ್ಠ ಯಕ್ಷಗಾನ ಕಲಾವಿದ ಸುಳ್ಯದ ‘ರಂಗಮನೆ’ಯ ಯಜಮಾನ ಸುಜನಾ ಸುಳ್ಯ(89) ಇಂದು(24.10.25) ವಯೊ ಸಹಜ ಅನಾರೋಗ್ಯದಿಂದ ದೈವಾಧೀನರಾದರು. ಅವರು ಪುತ್ರ ರಂಗಕರ್ಮಿ ಜೀವನರಾಂ ಸುಳ್ಯ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಸುಳ್ಯದ ಪ್ರಸಿದ್ಧ ನಾವೂರು ಮನೆತನದಲ್ಲಿ ಜನಿಸಿದ ಸುಜನಾ ಅವರು ನಾಟಕ ನಟರಾಗಿ ವೃತ್ತಿ ಆರಂಭಿಸಿದರು. ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಿಂದ ಯಕ್ಷಗಾನ ಕಲಾವಿದರಾಗಿ ಬಳ್ಳಂಬೆಟ್ಟು, ಧರ್ಮಸ್ಥಳ, ಇರಾಸೋಮನಾಥೇಶ್ವರ, ಕುದ್ರೋಳಿ, ಕೂಡ್ಲು, ಆದಿಸುಬ್ರಹ್ಮಣ್ಯ, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ ಮುವತ್ತಾರು ವರ್ಷ ಕಲಾಸೇವೆ ಗೈದಿದ್ದರು. ಹಾಸ್ಯ ಪಾತ್ರಗಳಲ್ಲಿ ವಿಶೇಷ ಸಿದ್ಧಿ ಪ್ರಸಿದ್ಧಿ ಪಡೆದಿದ್ದ ಇವರು ಎಲ್ಲಾ ರೀತಿಯ ಸ್ತ್ರೀ, ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಕಲಾಭಿಮಾನಿಳ ಪ್ರೀತಿಗೆ ಪಾತ್ರರಾಗಿದ್ದರು.

ಹಿಮ್ಮೇಳದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿದ್ದು, ತಾಳಮದ್ದಲೆ ಅರ್ಥಧಾರಿಯಾಗಿ, ಪ್ರಸಾಧನ ತಜ್ಞರಾಗಿ ಯಕ್ಷಗಾನದ ಸರ್ವಾಂಗವನ್ನೂ ಬಲ್ಲ ಕಲಾವಿದರಾಗಿದ್ದರು. ಯಕ್ಷಗಾನ ಗುರುಗಳಾಗಿ ಸುಳ್ಯದಲ್ಲಿ ‘ವಿದೇಯದೇವಿ ನಾಟ್ಯಕಲಾ ಸಂಘ’ ಸ್ಥಾಪಿಸಿ, ರಂಗ ಮನೆಯ ‘ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ’ದ ಮೂಲಕ ಹಲವರ ಯಕ್ಷಗಾನ ಕಲಿಕೆಗೆ ಪ್ರೇರಕ ಶಕ್ತಿಯಾಗಿದ್ದರು. ಅರ್ಹವಾಗಿಯೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಇವರಿಗೆ ಸಂಸ್ಥೆ 2008 ರಲ್ಲಿ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಸುಜನಾ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.


