ಉಡುಪಿ: ಕಾರ್ಕಳದ ಯುವಕ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣದಲ್ಲಿ ಹನಿ ಟ್ರ್ಯಾಪ್ ಆರೋಪಗಳು ಹೊರಬಿದ್ದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತನಿಖೆ ಮುಂದುವರೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಕ್ಕಾಗಿ ಆಗ್ರಹ ವ್ಯಕ್ತವಾಗುತ್ತಿರುವಂತೆಯೇ, ಪೊಲೀಸರು ತನಿಖೆಯ ಪ್ರಾಥಮಿಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದ ಅಭಿಷೇಕ್, ಅದರಲ್ಲಿ ಓರ್ವ ಯುವತಿ ಹಾಗೂ ಮೂವರು ಯುವಕರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿತರ ವಿರುದ್ಧ ಕ್ರಮಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ವ್ಯಕ್ತವಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ಮೊಬೈಲ್, ಬ್ಯಾಂಕ್ ವ್ಯವಹಾರಗಳು ಹಾಗೂ ಚಾಟ್ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಮೃತ ಯುವಕನ ಕುಟುಂಬದವರು, ಸ್ನೇಹಿತರು ಹಾಗೂ ಬಂಧುಗಳ ವಿಚಾರಣೆ ಪೂರ್ಣಗೊಂಡಿದೆ. ಈವರೆಗೆ ಹನಿ ಟ್ರ್ಯಾಪ್ ನಡೆದಿರುವ ಯಾವುದೇ ದೃಢ ದಾಖಲೆಗಳು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಪೊಲೀಸರು ನೀಡಿರುವ ಪ್ರಾಥಮಿಕ ತನಿಖಾ ವಿವರಗಳ ಪ್ರಕಾರ ಆರೋಪಿತ ಯುವತಿಯ ಮೊಬೈಲ್‌ನಲ್ಲಿ ಯಾವುದೇ ಆಕ್ಷೇಪಾರ್ಹ ಫೋಟೋಗಳು ಅಥವಾ ವಿಡಿಯೋಗಳು ಪತ್ತೆಯಾಗಿಲ್ಲ. ಅಶ್ಲೀಲ ವಿಡಿಯೋ ಅಥವಾ ಚಿತ್ರಗಳನ್ನು ಫಾರ್ವರ್ಡ್ ಮಾಡಿದ ದಾಖಲೆಯೂ ಇಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಅಭಿಷೇಕ್ ಯುವತಿಗೆ ಹಣ ಕಳುಹಿಸಿದ್ದರೂ, ಆಕೆ ತಕ್ಷಣವೇ ಹಣವನ್ನು ಮರಳಿಸಿದ್ದಾಳೆ. ಸಾವಿಗೂ ಮುನ್ನ ಅಭಿಷೇಕ್ ಯುವತಿಯ ಅಶ್ಲೀಲ ವೀಡಿಯೋವನ್ನು ಆಕೆಯ ಕೆಲಸದ ಆಸ್ಪತ್ರೆಯ ಸಿಬ್ಬಂದಿಗಳ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸಿದ್ದಾನೆ ಎನ್ನಲಾಗಿದೆ.

ಈ ಘಟನೆಯ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡುವ ಎಚ್ಚರಿಕೆ ನೀಡಿದ್ದಾಳೆ. ತನಿಖೆಯಿಂದ ತಿಳಿದುಬಂದಂತೆ, ಅಭಿಷೇಕ್ ಯುವತಿಯ ವಾಟ್ಸಾಪ್ ಖಾತೆಯಿಂದ ಆ ವಿಡಿಯೋವನ್ನು ವೆಬ್ ಮೂಲಕ ಪಡೆದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದ್ದು, ಅಭಿಷೇಕ್‌ನ ಮೊಬೈಲ್ ಅನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ಡೆತ್ ನೋಟ್‌ನ ಹಸ್ತಾಕ್ಷರ ಪರಿಶೀಲನೆ ಸಹ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೃತ ಯುವಕ ಹಾಗೂ ಆರೋಪಿತರ ವಿರುದ್ಧ ಅವಮಾನಕಾರಿ ಪೋಸ್ಟ್‌ಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಪೋಸ್ಟ್‌ಗಳು ಕಾನೂನುಬಾಹಿರವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹರಿರಾಮ ಶಂಕರ್ ಎಚ್ಚರಿಸಿದ್ದಾರೆ.
