Wednesday, October 22, 2025

spot_img

ಉದ್ಯೋಗ ಆಧಾರಿತ ಉನ್ನತ ಶಿಕ್ಷಣ ಸರಕಾರದ ಗುರಿ : ಸಚಿವ ಡಾ.ಎಂ.ಸಿ ಸುಧಾಕರ್

ಉಡುಪಿ: ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾಲೇಜುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಉದ್ಯೋಗ ಆಧಾರಿತ ಉನ್ನತ ಶಿಕ್ಷಣವನ್ನು ಪರಿಚಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.

 ಅವರು ಶನಿವಾರ ಬಾರಕೂರು ಶ್ರೀಮತಿ ರುಕ್ಮಿಣಿ ಶೆಟ್ಟಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ನೂತನ ಸಭಾಂಗಣದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕೋವಿಡ್ -19 ಸಾಂಕ್ರಾಮಿಕ ಬಳಿಕ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಏರುಪೇರು ಆಗಿದ್ದು ನಮ್ಮ ಸರ್ಕಾರವು ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ. ನಮ್ಮ ಸರ್ಕಾರ ಬಂದ ಬಳಿಕೆ 2024-25 ರ ವೇಳಾಪಟ್ಟಿಯನ್ನು ಅಕ್ಟೋಬರ್ ನವೆಂಬರ್ ನಲ್ಲೆ ಪ್ರಕಟಣೆ ಮಾಡುವ ಕಾರ್ಯ ನಡೆದಿದೆ. ಸಿ.ಇ.ಟಿ ಪರೀಕ್ಷೆ ಯಿಂದ ಹಿಡಿದು ಕಾಲೇಜುಗಳ ಸಂಯೋಜನೆ ಒಳಗೊಂಡಂತೆ ಎಲ್ಲಾ ವೇಳಾಪಟ್ಟಿಗಳು ಸಮಯಕ್ಕೆ ಸರಿಯಾಗಿ ನಡೆಯುವಂತೆ ನೋಡಲಾಗುತ್ತಿದೆ ಎಂದರು.

1242 ಸಹಾಯಕ ಉಪನ್ಯಾಸಕ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆಯಲಿದ್ದು ಯು.ಜಿ.ಸಿ ಮಾನ್ಯತೆ ಹೊಂದಿದ ಮತ್ತು ಹೊಂದಿಲ್ಲದ ಬಗ್ಗೆ ನ್ಯಾಯಾಲಯದ ಕಾನೂನು ತೊಡಕುಗಳಿದ್ದು, ಮಾನವೀಯತೆಯ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಏಕಕಾಲಕ್ಕೆ ಇಡೀ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ವೇಳಾಪಟ್ಟಿ ಪ್ರಕಟಣೆ ಕಾರ್ಯವು ಪ್ರಗತಿ ಕಾಣುತ್ತಿದೆ. ಕಾಲೇಜುಗಳ ವೇಳಾಪಟ್ಟಿ ಪ್ರಕಟಣೆಯಲ್ಲಿ ಹಂತ ಹಂತವಾಗಿ ಸುಧಾರಣೆ ಆಗುತ್ತಿದೆ ಎಂದ ಅವರು ರಾಜ್ಯದ ಎಲ್ಲ ಸರ್ಕಾರಿ ಕಾಲೇಜುಗಳಿಗೆ ಹೊಸ ರೂಪ ನೀಡಲಾಗುವುದು. ಕಾಲೇಜು ಕಟ್ಟಡ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಂಡು ನೀಡಲಾದ ಅನುದಾನವನ್ನು ಆದ್ಯತೆ ಮೇರೆಗೆ ಬಳಸಿ ಕೊಳ್ಳಬೇಕು. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ವಿನ್ಯಾಸಗಳನ್ನು ರೂಪಿಸಬೇಕು ಎಂದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರಿ ಕಾಲೇಜುಗಳಿಗೆ ಬೇಕಾದ ಮೂಲಭೂತ ಸೌಕರ್ಯ ಸಕಾಲದಲ್ಲಿ ದೊರೆತರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳು ಮಾತ್ರ ಸರಕಾರಿ ಕಾಲೇಜುಗಳಿಗೆ ದಾಖಲಾಗುತ್ತಾರೆ. ಉಡುಪಿ ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಜಿಲ್ಲೆಯಲ್ಲಿ ನಿಗದಿತ ಸಂಖ್ಯೆಯ ಹಾಸ್ಟೆಲ್‌ಗಳು ಇಲ್ಲದೆ ವಿದ್ಯಾರ್ಥಿಗಳು ವಾಪಸು ಹೋಗುವ ಘಟನೆಗಳು ನಡೆಯುತ್ತಿದ್ದು, ಕುಂದಾಪುರ ವ್ಯಾಪ್ತಿಯಲ್ಲಿ 2 ಹಾಸ್ಟೆಲ್ ನಿರ್ಮಿಸಲು ಸರಕಾರ ಗಮನಹರಿಸಬೇಕು ಎಂದ ಅವರು, ಅತಿಥಿ ಉಪನ್ಯಾಸಕರ ಕೊರತೆಯನ್ನು ನೀಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕು. ಸರಕಾರ ನೀಡುವ ಅನುದಾನಗಳನ್ನು ಶಾಸಕರ ಗಮನಕ್ಕೆ ತಂದಲ್ಲಿ ಆದ್ಯತೆ ಮೇರೆಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಕಾಲೇಜು ಪುನರಾರಂಭದ ವೇಳಾಪಟ್ಟಿಯ ನಿರ್ದಿಷ್ಟ ದಿನಾಂಕವನ್ನು ಮೊದಲೇ ತಿಳಿಸಿದ್ದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುವುದರೊಂದಿಗೆ ಗೊಂದಲಗಳು ಕಡಿಮೆಯಾಗುತ್ತವೆ. ಅತಿಥಿ ಉಪನ್ಯಾಸಕರ ಕೊರತೆಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಈ ನಿಟ್ಟಿನಲ್ಲಿ ಸರಕಾರವು ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗಿರುವ ತೊಡಕುಗಳನ್ನು ಶೀಘ್ರದಲ್ಲಿ ನಿವಾರಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹನೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಪೂಜಾರಿ, ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಾರಕೂರು ಶಾಂತರಾಮ್ ಶೆಟ್ಟಿ, ಮಂಗಳೂರು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ. ಕೆ. ಆರ್ ಕವಿತಾ, ಮಂಗಳೂರು ವಿ.ವಿ ಸಿಂಡಿಕೇಟ್ ಸದಸ್ಯ ಸತೀಶ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ ನಿರೂಪಿಸಿದರು.

ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಡಿಗ್ರಿ ಕಾರ್ಯಕ್ರಮ ರೂಪಿಸಲಾಗಿದೆ. 5 ಮತ್ತು 6 ನೇ ಸೆಮಿಸ್ಟರ್ ಹಂತದಲ್ಲೇ ಕ್ರೋಮಾ, ರಿಲಯನ್ಸ್ ನಂತಹ ಕಂಪನಿಗಳಲ್ಲಿ ಉದ್ಯೋಗ ನೀಡುವ, ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್, ಆಪ್ಟಿಟ್ಯೂಡ್, ಕರಿಯರ್ ಕೌನ್ಸಲಿಂಗ್ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಇಲ್ಲದ ಕೋರ್ಸ್ಗಳನ್ನು ತೆಗೆದು ಹೆಚ್ಚು ಬೇಡಿಕೆ ಇರುವ ಕೋರ್ಸ್ಗಳನ್ನು ಉಳಿಸಲಾಗುವುದು.

ಡಾ. ಎಂ.ಸಿ. ಸುಧಾಕರ್ (ಉನ್ನತ ಶಿಕ್ಷಣ ಸಚಿವರು)

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles