ಉಡುಪಿ : ಜಿಲ್ಲೆಯಲ್ಲಿ 2025–26ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯವನ್ನು ಜಿ.ಪಿ.ಎಸ್ ಆಧಾರಿತವಾಗಿ ಖಾಸಗಿ ನಿವಾಸಿಗಳ ಮೂಲಕ ಕೈಗೊಳ್ಳಲಾಗುತ್ತಿದ್ದು, ರೈತರಿಗೆ ತಮ್ಮ ಬೆಳೆ ವಿವರಗಳ ಕುರಿತು ಪರಿಶೀಲನೆ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಹೊರಬಂದ ಪ್ರಕಟಣೆಯಂತೆ, ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಪ್ರಕೃತಿ ವಿಕೋಪ ಪರಿಹಾರ ವಿತರಣೆ, ಬೆಳೆ ವಿಮೆ ಯೋಜನೆ, ಬೆಳೆ ಸಾಲ ಮಂಜೂರು, ಪಹಣಿ ದಾಖಲೆಗಳ ನವೀಕರಣ, ಬೆಂಬಲ ಬೆಲೆ ಯೋಜನೆ ಫಲಾನುಭವಿಗಳ ಗುರುತಿಸುವಿಕೆ ಸೇರಿದಂತೆ ವಿವಿಧ ಕೃಷಿ ಸಂಬಂಧಿತ ಯೋಜನೆಗಳ ಅನುಷ್ಠಾನಕ್ಕೆ ಉಪಯೋಗಿಸಲಾಗುತ್ತದೆ.

ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ವಿವರಗಳ ಕುರಿತು ರೈತರಿಗೆ ಯಾವುದೇ ಆಕ್ಷೇಪಣೆ ಅಥವಾ ತಿದ್ದುಪಡಿ ಸಲಹೆಗಳಿದ್ದಲ್ಲಿ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ “Bele Darshak – 2025–26” ಆಪ್ ಮೂಲಕ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ರೈತರಿಂದ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಸಂಬಂಧಿತ ಗ್ರಾಮದ ಮೇಲ್ವಿಚಾರಕರು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.