ಉಡುಪಿ : ತಾಯಿ ಮತ್ತು ಮಗಳು ಕುಂದಾಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಶಾಸ್ತ್ರೀ ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದು ಕರಿಮಣಿ ಸರ ಅಪಹರಿಸಿಕೊಂಡು ಹೋದ ಸರಗಳ್ಳರನ್ನು ಕುಂದಾಪುರ ಪೊಲೀಸ್ ರು ಬಂಧಿಸಿದ್ದಾರೆ. ಸಂಜಯ್ ಎಲ್ (33), ವಸಂತ ಕುಮಾರ್ (30) ಕುಂದಾಪುರ ಪೊಲೀಸ್ ರ ವಶದಲ್ಲಿರುವ ಸರಗಳ್ಳರು.

ಮೀನಾಕ್ಷಿ ಎನ್ನುವವರು ತಮ್ಮ ಮಗಳಾದ ಜ್ಯೋತಿಯೊಂದಿಗೆ ಕುಂದಾಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಶಾಸ್ತ್ರೀ ಸರ್ಕಲ್ ಕಡೆಗೆ ನಡೆದುಕೊಂಡು ಬರುವಾಗ ಕುಂದಾಪುರ ಬಿಎಸ್ ಎನ್ ಎಲ್ ಕಛೇರಿ ಬಳಿ, ಹಿಂದಿನಿಂದ ಬೈಕ್ ನಲ್ಲಿ ಬಂದಿದ್ದ ಆರೋಪಿಗಳು, ಮೀನಾಕ್ಷಿ ಅವರ ಕುತ್ತಿಗೆ ಕೈ ಹಾಕಿ ಕರಿಮಣಿ ಸರ ಎಳೆದು ಪರಾರಿಯಾಗಿದ್ದಾರೆ. ಈ ಕುರಿತು ಮೀನಾಕ್ಷಿ ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಕುಂದಾಪುರ ಪೊಲೀಸ್ ರ ತಂಡ, ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಶಿವಮೊಗ್ಗ ಜಿಲ್ಲೆಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 3 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಹಾಗೂ ಮೋಟಾರ್ ಸೈಕಲ್ ಸೇರಿ, 8 ಲಕ್ಷದ 20 ಸಾವಿರ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
