ಉಡುಪಿ : ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ತನ್ನ ಪಾದಾರ್ಪಣಾ ಪ್ರಯತ್ನದಲ್ಲಿಯೇ, ಬೆಳಗಾವಿಯಲ್ಲಿ ನಡೆದ 16ನೇ ಕರ್ನಾಟಕ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ, ಒಂದು ಕಂಚಿನ ಪದಕ ಪಡೆಯುವುದರೊಂದಿಗೆ , ಮೂವರು ಸೈಕ್ಲಿಸ್ಟ್ ಗಳು ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ.

ಮಹಿಳೆಯರ ಮುಕ್ತ ಸ್ಪರ್ಧೆಯಲ್ಲಿ ಕುಮಾರಿ ಗ್ಲಿಯೋನಾ ಡಿಸೋಜಾ ಚಿನ್ನದ ಪದಕವನ್ನೂ, ಪುರುಷರ 23 ವರ್ಷದ ಸ್ಪರ್ಧೆಯಲ್ಲಿ ಹಾರ್ದಿಕ ರೈ ತೃತೀಯ ಸ್ಥಾನ ದೊಂದಿಗೆ ಕಂಚಿನ ಪದಕವನ್ನು ಪಡೆಯುವುದರೊಂದಿಗೆ ನವೆಂಬರ್ ತಿಂಗಳಲ್ಲಿ ಒರಿಸ್ಸಾ ದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ ಅಂತೆಯೇ ಪುರುಷರ 23 ವರ್ಷದ ವಯೋಮಿತಿ ವರ್ಗದಲ್ಲಿ ನೀಲ್ ಡಿಸೋಜಾ ರವರು ತಮ್ಮ ಅಸಾಧಾರಣ ಸಾಧನೆಯೊಂದಿಗೆ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ತಂಡದ ಇತರ ಸೈಕ್ಲಿಸ್ಟ್ ಗಳಾದ ಶ್ರೀನಿಧಿ ಉರಾಳ, ದೀಪಕ್ ಕುಮಾರ್, ಶುಭಾ, ದರ್ಶಿಲ್, ಜೋಶುವಾ ಫೆರ್ನಾಂಡಿಸ್ ತಮ್ಮ ಸ್ಪರ್ಧೇಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇನ್ನು ಹಾರ್ದಿಕ ರೈ ಇದೇ ತಿಂಗಳಲ್ಲಿ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ತಂಡದೊಂದಿಗೆ ಅಧ್ಯಕ್ಷ ಹಾಗೂ ತರಬೇತುದಾರರಾದ ಡಾ. ಗುರುರಾಜ್ ಕೆ ರವರು, ತಂಡದ ವ್ಯವಸ್ಥಾಪಕ ಹಾಗೂ ಉಪಾಧ್ಯಕ್ಷರಾದ ಡಾ. ಸೈಯದ್ ಮುಸ್ತಫಾ ಹಸನಿ, ಕೋಶಾಧಿಕಾರಿ ಹಾಗೂ ಕ್ರೀಡಾ ಸಂಯೋಜಕರಾದ ದೀಪಕ್ ಕುಮಾರ್ ರವರು ತಂಡದೊಂದಿಗಿದ್ದು, ಪ್ರಶಸ್ತಿ ಸ್ವೀಕರಿಸಿದರು.
