ಉಡುಪಿ : ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಇಬ್ಬರು ಯುವಕರು ನೀರಿಗೆ ಇಳಿದು ಸಮುದ್ರಪಾಲಾದ ಘಟನೆ ಶುಕ್ರವಾರ ಸಂಜೆ ಮಲ್ಪೆ ಸಮುದ್ರ ತೀರದಲ್ಲಿ ನಡೆದಿದೆ. ಇಬ್ಬರಲ್ಲಿ ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಇನ್ನೋರ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದಾನೆ.

ಬೀಚ್ ನಲ್ಲಿ ಈಜಾಡುತ್ತಿದ್ದ ಹಾಸನ ಮೂಲದ ಮಿಥುನ್ ಹಾಗೂ ಶಶಾಂಕ್ ಸಮುದ್ರಪಾಲಾಗಿದ್ದು, ಶಶಾಂಕ್ ನನ್ನು ಸಹ ಪ್ರವಾಸಿಗರು ರಕ್ಷಣೆ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿ ರಕ್ಷಣೆ ಮಾಡಲಾಗಿದ್ದು, ಸದ್ಯ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಿಥುನ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ. ಇನ್ನು ಕಳೆದ ಕೆಲವು ದಿನಗಳಿಂದ ದಸರಾ ರಜೆ ಹಿನ್ನಲೆಯಲ್ಲಿ ಮಲ್ಪೆ ಬೀಚ್ ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಆದರೆ ಇಲ್ಲಿ ಜನರ ರಕ್ಷಣೆಗಾಗಿ ಕೇವಲ ಮೂರು ಜನ ಲೈಫ್ ಗಾರ್ಡ್ ಗಳನ್ನು ನೇಮಿಸಿದ್ದು, ಅವರಿಗೂ ಕೂಡ ಸರಿಯಾಗಿ ಈಜಲು ಬರುವುದಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ. ಸಾವಿರಾರು ಜನ ಬೀಚ್ ಗೆ ಭೇಟಿ ನೀಡುತ್ತಿದ್ದರು ಕೂಡ ಜಿಲ್ಲಾಢಳಿತ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.