ಉಡುಪಿ : ಮನೆಯ ಎದುರು ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿ ನಗ ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಕಾರ್ಕಳ ಕುಕ್ಕುಂದೂರು ಗ್ರಾಮದ ಸಾತುರ್ನಿನ್ ಮತಾಯಸ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.

ಸಾತುರ್ನಿನ್ ಮತಾಯಸ್ ಎನ್ನುವವರು ಮನೆಗೆ ಬೀಗ ಹಾಕಿ ಉತ್ತರ ಭಾರತದ ಲೇಹ್‌ಗೆ ಹೋಗಿದ್ದು ಹಾಗೂ ಇವರ ಪತ್ನಿಯು ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿಗೆ ಅತ್ತಿಗೆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಅಕ್ಟೋಬರ್ ೧ ರಂದು ಮರಳಿ ಬಂದು ನೋಡುವಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ.

ಕಳ್ಳರು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಬೆಡ್‌ರೂಮ್‌ನಲ್ಲಿ ಕಬ್ಬಿಣದ ಕಪಾಟನ್ನು ಪಿಕ್ಕಾಸಿನಿಂದ ಒಡೆದು ಕಪಾಟಿನಲ್ಲಿದ್ದ 1,50,000 ರೂಪಾಯಿ ಹಣ, ಸುಮಾರು 24 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್, ಸುಮಾರು 12 ಗ್ರಾಮ್ ತೂಕದ 2 ಚಿನ್ನದ ಚಿನ್ನದ ಬಳೆಗಳು, , ಸುಮಾರು 25 ಗ್ರಾಮ್ ತೂಕದ ಚಿನ್ನದ ಚೈನ್ – 2, ಸುಮಾರು 12 ಗ್ರಾಮ್ ತೂಕದ ಚಿನ್ನದ 2 ಜೊತೆ ಕಿವಿಯ ರಿಂಗ್, 1.25000 ರೂಪಾಯಿ ಮೌಲ್ಯದ ವಜ್ರದ ಪೆಂಟೆಂಡ್ ಇರುವ ಚಿನ್ನದ ಚೈನ್ 1 ಹಾಗೂ ಒಂದು ಮುತ್ತಿನ ಹಾರ , 1000 ಮೌಲ್ಯದ ಅಮೇರಿಕನ್ ಡಾಲರ್ಸ್, 500 ಮೌಲ್ಯದ ಬ್ರಿಟೀಷ್ ಪೌಂಡ್ಸ್ ಸೇರಿ ಒಟ್ಟು 6.50,000 ರೂಪಾಯಿ ಮೌಲ್ಯದ ಸೊತ್ತು ಕಳವಾಗಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳ್ಳತನ ನಡೆದ ಮನೆಗೆ ಕಾರ್ಕಳ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.


