ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ.

ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ನಾಲ್ಕು ಕಾರ್ಯಗಳನ್ನು ಮಾಡಬೇಕಾಗಿರುತ್ತದೆ.

ಆಯುಧಪೂಜೆಯ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.
‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅeತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವ ವಾಗಿತ್ತು. ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವ ವನ್ನು ಆಚರಿಸುತ್ತಿದ್ದರು. ಕಲಶ ಸ್ಥ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವ ರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು

ದಸರಾದಂದು ಅಪರಾಜಿತಾ ಪೂಜೆ ಮಾಡಲಾಗುತ್ತದೆ. ‘ಅಪರಾಜಿತಾ’ ಈ ದುರ್ಗಾದೇವಿಯ ಮಾರಕ ರೂಪವು ಪೃಥ್ವಿತತ್ತ್ವದ ಆಧಾರದ ಮೇಲೆ ಭೂಗರ್ಭದಿಂದ ಪ್ರಕಟವಾಗಿ ಪೃಥ್ವಿಯ ಮೇಲಿನ ಜೀವಗಳಿಗೆ ಕಾರ್ಯ ಮಾಡುತ್ತದೆ. ಅಷ್ಟದಳದ ಸಿಂಹಾಸನದ ಮೇಲೆ ಆರೂಢಳಾದ ಈ ತ್ರಿಶೂಲಧಾರಿ ರೂಪವು ಶಿವನ ಸಂಯೋಗದಿಂದ ದಿಕ್ಪಾಲ ಹಾಗೂ ಗ್ರಹದೇವತೆಯ ಸಹಾಯದಿಂದ ಅಸುರೀ ಶಕ್ತಿಗಳನ್ನು ನಾಶಮಾಡುತ್ತದೆ. ಶಕ್ತಿತತ್ತ್ವದ ಭಕ್ತರ ಪ್ರಾರ್ಥನೆಯಂತೆ ಅಷ್ಟದಳದ ಮೇಲೆ ಆರೂಢಳಾದ ಅಪರಾಜಿತಾ, ಪೃಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನಳಾದಾಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳದ ಅಗ್ರಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಪರಾಜಿತಾ ದೇವಿಯ ಉತ್ಪತ್ತಿಯಿಂದ ಪ್ರಕ್ಷೇಪಿತವಾಗುವ ಮಾರಕ ಲಹರಿಗಳು, ಅಷ್ಟಪಾಲರ ಮಾಧ್ಯಮದಿಂದ ಅಷ್ಟದಿಕ್ಕುಗಳಿಗೆ ನಸುಗೆಂಪು ಬಣ್ಣದ ಪ್ರಕಾಶಲಹರಿಗಳ ಮಾಧ್ಯಮದಿಂದ ಪ್ರಕ್ಷೇಪಿತವಾಗಿ ಆಯಾ ಕೋನಗಳಲ್ಲಿ ಸಂಪುಟಿತವಾಗಿರುವ ರಜ-ತಮಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮತ್ತು ಪೃಥ್ವಿಯ ಮೇಲಿನ ಜೀವಗಳಿಗೆ ನಿರ್ವಿಘ್ನವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ವಾಯುಮಂಡಲವನ್ನು ಶುದ್ಧೀಕರಿಸುತ್ತವೆ. ಬನ್ನಿ ಎಲೆಗಳಲ್ಲಿ ತೇಜವನ್ನು ವೃದ್ಧಿಸುವ ಗುಣವಿರುವುದರಿಂದ ಬನ್ನಿಗಿಡದ ಹತ್ತಿರ ಶ್ರೀದುರ್ಗಾದೇವಿಯನ್ನು ಅಪರಾಜಿತಾ ರೂಪದಲ್ಲಿ ಪೂಜಿಸುತ್ತಾರೆ.
(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)
ಸಂಗ್ರಹ : ನಿತ್ಯಾನಂದ ಕಾಮತ್, ಮೂಡುಬಿದಿರೆ