Thursday, October 23, 2025

spot_img

ಅಬ್ಬಕ್ಕಳ ಧೈರ್ಯ, ಸಾಹಸ ಆದರ್ಶವಾಗಬೇಕು : ವಸಂತ್ ಕುಮಾರ್

ಉಡುಪಿ: ರಾಣಿ ಅಬ್ಬಕ್ಕರವರ ಬದುಕಿನ ಬಗೆಗೆ ಇಂದಿನ ಯುವಪೀಳಿಗೆ ಅರಿತು, ಅವರ ಧೈರ್ಯ, ಸಾಹಸ, ದೇಶಪ್ರೇಮವನ್ನು ತಮ್ಮೊಳಗೆ ಮೈಗೂಡಿಸಿಕೊಳ್ಳಬೇಕು ಎಂದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ವಸಂತ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಗುರುವಾರ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಜಂಟಿ ಆಶ್ರಯದಲ್ಲಿ ನಡೆದ “ರಾಣಿ ಅಬ್ಬಕ್ಕ – ಯುಗಯುಗಗಳಿಂದ ಧೈರ್ಯದ ಪ್ರತಿಧ್ವನಿ” ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಣಿ ಅಬ್ಬಕ್ಕೆ ಮೂಡಬಿದ್ರೆಯ ಚೌಟ ಮನೆತನಕ್ಕೆ ಸೇರಿದವರಾಗಿದ್ದು, 1525 ರಲ್ಲಿ ಜನಿಸಿದ್ದಾರೆ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಆದರೆ ಈ ಬಗ್ಗೆ ಅನೇಕ ದ್ವಂದ್ವಗಳಿದೆ. ಆದರೆ ಆಕೆ 40 ವರ್ಷ ನಿರಂತರವಾಗಿ ಪೋರ್ಚುಗೀಸರ ವಿರುದ್ದ ಹೋರಾಡಿರುವುದು ಸುಳ್ಳಲ್ಲ. ಇದು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದವರು ಬಣ್ಣಿಸಿದರು. ಮೊದಲ ಬಾರಿಗೆ ನೌಕ ಪಡೆಯನ್ನು ಕಟ್ಟಿ, ಪೋರ್ಚುಗೀಸರಿಗೆ ಸೋಲಿನ ರುಚಿಯನ್ನು ಉಣಿಸಿದ ವೀರ ಮಹಿಳೆ ಅಬ್ಬಕ್ಕ. ಅವರ ಸಾಹಸಗಾಥೆಯನ್ನು ಓದಿ ಇಂದಿನ ಯುವಪೀಳಿಗೆ ಧೈರ್ಯ, ಸಾಹಸವನ್ನು ಕರಗತಮಾಡಿಕೊಳ್ಳಬೇಕು. ಮೊಬೈಲ್ ಎಂಬ ಮಾಯಜಾಲದೊಳಗೆ ಇಂತಹ ಅನೇಕ ಸಂಗತಿಗಳು ಅಡಗಿವೆ. ಕೇವಲ “ಪಬ್ಜಿ” ಆಟ, ಮನರಂಜನೆಗಾಗಿ ಮೊಬೈಲನ್ನು ಬಳಸದೇ, ಇಂತಹ ದೇಶಪ್ರೇಮದ ಸಂಗತಿಯನ್ನು ತಿಳಿಯಲು ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಹೇಳುವಾಗ, ನಾವುಗಳು ಅನೇಕ ಹೋರಾಟಗಾರರ ಹೆಸರನ್ನು ಉಲ್ಲೇಖಿಸುತ್ತೇವೆ. ಆದರೆ ನಮ್ಮದೇ ನೆಲದ ಗಟ್ಟಿಗಿತ್ತಿ, ಸಿಂಹಿಣಿಯಂತೆ ಬದುಕಿದ ರಾಣಿ ಅಬ್ಬಕ್ಕಳ ಬಗ್ಗೆ ನಮಗೆಷ್ಟು ತಿಳಿದಿದೆ ಎಂದು ನಾವು ಪ್ರಶ್ನಿಸಿಕೊಳ್ಳಬೇಕು. ಇತಿಹಾಸದ ಅಧ್ಯಯನ ಅತೀ ಅಗತ್ಯ. ಅದರಲ್ಲೂ ನಮ್ಮ ನೆಲದ ಹೋರಾಟಗಾರರ ಬಗ್ಗೆ ನಾವು ಅಧ್ಯಯನ ನಡೆಸಿ, ಸಾಧ್ಯವಾದಷ್ಟು ಜ್ಞಾನವನ್ನು ಇತರರಿಗೆ ಧಾರೆ ಎರೆಯಬೇಕು ಎಂದು ನುಡಿದರು. ಕಾಲೇಜಿನ ಪ್ರಾಂಶುಪಾಲೆ ಸುರೇಖಾ. ಕೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಾದ ರಕ್ಷಿತಾ ಸ್ವಾಗತಿಸಿ, ದಿಶಾ ಭಟ್ ನಿರೂಪಿಸಿ, ವಂದಿಸಿದರು. ಪ್ರಾಧ್ಯಾಪಕಿ ಚೈತ್ರಾ ಕುಮಾರಿ ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles