ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕುಲಾಧಿಪತಿ ಡಾ. ರಾಮದಾಸ್ ಎಂ ಪೈ ಅವರ 90 ನೇ ಜನ್ಮದಿನದ ಶುಭ ಸಂದರ್ಭದಲ್ಲಿ, ಎಲ್ಲಾ ಯಕ್ಷಗಾನ ಕಲಾವಿದರಿಗೆ ಮಣಿಪಾಲ ಆರೋಗ್ಯ ಕಾರ್ಡ್ ನೀಡುವುದಾಗಿ ಸಂಸ್ಥೆ ಘೋಷಿಸಿದೆ. ಸಾಂಸ್ಕೃತಿಕ ಪರಂಪರೆಗೆ ಗಣನೀಯವಾಗಿ ಕೊಡುಗೆ ನೀಡುವ ಯಕ್ಷಗಾನ ಕಲಾವಿದರಿಗೆ ಉತ್ತಮ ಆರೋಗ್ಯ ನಿರ್ವಹಣೆ ಮತ್ತು ಕಲ್ಯಾಣ ಬೆಂಬಲವನ್ನು ಸೂಚಿಸುವ ಉದ್ದೇಶಕ್ಕೆ ಆರೋಗ್ಯ ಘೋಷಣೆ ಮಾಡಲಾಯಿತು.

ಈ ಸಮಾರಂಭದಲ್ಲಿ ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ, ಮಾಹೆಯ ವೈಸ್ ಚಾನ್ಸಲರ್ ಲೆಫ್ಟಿನೆಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್, ಮಾಹೆಯ ಪ್ರೊ ವೈಸ್ ಚಾನ್ಸೆಲರ್ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ. ನಾರಾಯಣ್ ಸಭಾಹಿತ್, ಮಾಹೆಯ ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನ) ಡಾ. ಶರತ್ ರಾವ್, ಮಾಹೆಯ ರಿಜಿಸ್ಟ್ರಾರ್ ಗಿರಿಧರ್ ಕಿಣಿ, ಮಣಿಪಾಲ ಸಮೂಹ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ದಿಗ್ಗಜರಾದ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತು ಮಾಹೆಯ ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ ಸೇರಿದಂತೆ ಹಲವಾರು ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.