ಕಾರ್ಕಳ: ಪತ್ನಿಯೇ ಪತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯಲ್ಲಿ ನಡೆದಿದೆ. ನಿಟ್ಟೆ ಪರಪ್ಪಾಡಿಯ ಶೇಖರ ಮೂಲ್ಯ(65) ನ ಪತ್ನಿ ಮಾಲತಿ ಮೂಲ್ಯ ಕತ್ತಿಯಿಂದ ಹಲ್ಲೆ ನಡೆಸಿದ ಆರೋಪಿ.

ಈ ದಂಪತಿಗಳು ಕುಡಿದು ನಿತ್ಯ ಜಗಳವಾಡುತ್ತಿದ್ದರು, ಸೆಪ್ಟೆಂಬರ್ 6 ರಂದು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ, ಮಾಲತಿ ಮೂಲ್ಯ ಕುಡಿದ ಮತ್ತಿನಲ್ಲಿ ಗಂಡನನ್ನು ಮನಸೋ ಇಚ್ಚೆ ಕಡಿದು ಕಡಿದು ಹತ್ಯೆಗೆ ಯತ್ನಿಸಿದ್ದಾಳೆ. ಬಳಿಕ ಕುಡಿತದ ನಶೆ ಇಳಿದ ಬಳಿಕ ತನ್ನ ಗಂಡನನ್ನು ಅಪರಿಚಿತ ವ್ಯಕ್ತಿಗಳು ಕಡಿದು ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿ ಮಗಳಿಗೂ, ಸಂಬಂಧಿಕರನ್ನು ನಂಬಿಸಲು ಯತ್ನಿಸಿದ್ದಾಳೆ. ಗಾಯಗೊಂಡ ರಕ್ತ ಮಡುವಿನಲ್ಲಿ ಮಲಗಿದ್ದ ಶೇಖರ ಮೂಲ್ಯ ಅವರನ್ನು ಮಗಳು ಅಳಿಯ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಆತನ ಚೇತರಿಸಿಕೊಂಡಿದ್ದಾನೆ.

ವಈ ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಪತ್ನಿಯ ನಡವಳಿಕೆ ಕುರಿತು ಅನುಮಾನಗೊಂಡ ಪೊಲೀಸ್ ತೀವ್ರವಾಗಿ ವಿಚಾರಣೆ ನಡೆಸಿದಾಗ, ಗಂಡ ಕುಡಿದು ಬಂದು ಜಗಳವಾಡುತ್ತಿದ್ದ ಹಾಗಾಗಿ ನಾನೇ ಗಂಡನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಅರೋಪಿ ಮಾಲತಿ ಮೂಲ್ಯಳನ್ನು ಪೊಲೀಸ್ ರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದೇ ಶೇಖರ ಮೂಲ್ಯ ಹಾಗೂ ಮಾಲತಿ ಮೂಲ್ಯ ದಂಪತಿ ಸೇರಿ 14 ವರ್ಷಗಳ ಹಿಂದೆ ಅಂದರೆ 2011ರಲ್ಲಿ, ಪಕ್ಕದ ಮನೆಯ ವೃದ್ಧ ನೆರೆಮನೆಯ ರಾಮಣ್ಣ ಮೂಲ್ಯ(75) ನನ್ನು ಕಡಿದು ಕೊಲೆ ಮಾಡಿದ್ದರು. ಮನೆಯಲ್ಲಿ ಕಡಿದು ಕೊಲೆ ಮಾಡಿ ಶವವನ್ನು ಮನೆಯ ಅಂಗಳದಲ್ಲಿ ಎಸೆದಿದ್ದರು. ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕೊಲೆ ಪ್ರಕರಣದಲ್ಲಿ ಗಂಡ ಹೆಂಡತಿ ಜೀವಾವಧಿ ಶಿಕ್ಷೆಗೆ ಒಳಗಾಗಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿ ಸನ್ನಡತೆ ಆಧಾರದಲ್ಲಿ 2021 ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಿ ಕೇವಲ 4 ವರ್ಷದಲ್ಲೇ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪತ್ನಿ ಮತ್ತೆ ಜೈಲು ಸೇರಿದ್ದಾಳೆ.