ಉಡುಪಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆ ಪ್ರಕರಣವನ್ನು ತನಿಖೆ ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಎಬಿವಿಪಿ ವರ್ಷದ ಹಿಂದೆ ಪ್ರತಿಭಟನಾ ಜಾಥ ನಡೆಸಿತ್ತು. ಈ ಪ್ರತಿಭಟನಾ ಜಾಥಾದಲ್ಲಿ ಭಾಗಿಯಾದ ಎಬಿವಿಪಿಯ 15 ವಿದ್ಯಾರ್ಥಿ ನಾಯಕರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 341, 290, 149 ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಕುರಿತು ಉಡುಪಿ ನ್ಯಾಯಲಯದ ಮೆಟ್ಟಿಲೇರಿದ್ದ ವಿದ್ಯಾರ್ಥಿಗಳು ನ್ಯಾಯವಾದಿ ಶ್ರೀನಿಧಿ ಹೆಗ್ಡೆ ನೇತೃತ್ವದಲ್ಲಿ ಜಾಮೀನು ಪಡೆದಿದ್ದರು. ನಂತರ ಈ ಪ್ರಕರಣದ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ರಿಟ್ ಪೆಟಿಷನ್ ಆಲಿಸಿದ ಎಸ್.ಆರ್ ಕೃಷ್ಣಕುಮಾರ್ ನೇತೃತ್ವದ ಏಕ ಸದಸ್ಯ ಪೀಠ ವಿದ್ಯಾರ್ಥಿಗಳ ವಿರುದ್ಧ ಇರುವ ಪ್ರಕರಣವನ್ನು ವಜಾಗೊಳಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಎತ್ತಿ ಹಿಡಿದಿದೆ.

ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯವಾದಿಯಾದ ಅರುಣ್ ಶ್ಯಾಮ್ ರ ಮಾರ್ಗದರ್ಶನದಲ್ಲಿ ಸುಯೋಗ್ ಇವರು ಮಂಡಿಸಿದ ರಿಟ್ ಪೆಟಿಷನ್ ನಲ್ಲಿ ವಕೀಲರಾದ ಶ್ರೀರಾಮ ಅಂಗೀರಸ, ನಿಶಾಂತ್ ಎಸ್.ಕೆ, ರಿತೀಕ್ ವೈ.ಎಂ, ಜಾಗೃತ್, ಚೈತ್ರ ಶ್ರೀಹರಿ, ರಾಧಿಕಾ, ತುಷಾರ್ ಇವರು ಅಡ್ವೊಕೇಟ್ ಆನ್ ರೆಕಾರ್ಡ್ ಆಗಿದ್ದರು.


