ಕುಂದಾಪುರ : ಖ್ಯಾತ ಕಲಾ ನಿರ್ದೇಶಕ, ನಟ ದಿನೇಶ್ ಮಂಗಳೂರು ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ನಿಧನ. ಕಳೆದ ಕೆಲವು ದಿನಗಳಿಂದ ತೀರ್ವ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ದಿನೇಶ್ ಮಂಗಳೂರು ಮೃತಪಟ್ಟಿದ್ದಾರೆ.

ಕಾಂತಾರದಲ್ಲಿ ಮುಖ್ಯ ಪಾತ್ರದಲ್ಲಿ ದಿನೇಶ್ ಮಂಗಳೂರು ಕಾಣಿಸಿಕೊಳ್ಳಬೇಕಿತ್ತು. ಚಿತ್ರದ ಚಿತ್ರೀಕರಣದ ಸಂದರ್ಭವೇ ಪಾರ್ಶ್ವವಾಯು ಪೀಡಿತರಾದ ಹಿನ್ನಲೆಯಲ್ಲಿ ಕಾಂತಾರ ಚಿತ್ರ ತಂಡ ದಿನೇಶ್ ಮಂಗಳೂರು ಅವನ್ನು ಬೆಂಗಳೂರಿನಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿತ್ತು. ಬಳಿಕ ದಿನೇಶ್ ಮಂಗಳೂರು ಅವರು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಆಗದೆ ಇರುವ ಹಿನ್ನಲೆಯಲ್ಲಿ, ಆ ಪಾತ್ರವನ್ನು ಬೇರೊಬ್ಬ ನಟರಿಂದ ಮಾಡಿಸಲಾಗಿತ್ತು. ಚಿಕಿತ್ಸೆ ಬಳಿಕ ಮಾತನಾಡಲಾರದ ಸ್ಥಿತಿಯಲ್ಲಿದ್ದ ದಿನೇಶ್ ಮಂಗಳೂರು ಅವರು ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿತ್ತು. ಕುಂದಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಕಳೆದ ವಾರದ ಹಿಂದೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಸರ್ಜನ್ ಆಸ್ಪತ್ರೆ ಸೇರಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸರಿ ಸುಮಾರು ೫೫ ಕ್ಕೂ ಅಧಿಕ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಇವರು, ಅಸ್ಫೋಟ ಚಿತ್ರ ಮೂಲಕ ಚಿತ್ರ ರಂಗ ಪ್ರವೇಶ ಮಾಡಿದ್ದರು. ಮೃತರು ಕನ್ನಡ ಚಿತ್ರರಂಗದ ದೊಡ್ಡ ಆಸ್ತಿಯಾಗಿದ್ದರು, ಜನಮದ ಜೋಡಿಯಂತಹ ಅಪೂರ್ವ ಚಿತ್ರದ ಕಲಾ ನಿರ್ದೇಶಕರಾಗಿ ಹೆಸರು ಮಾಡಿದ್ದರು. ನಟಿ ತಾರಾ, ಪ್ರಕಾಶ್ ರಾಜ್ ಜೊತೆ ಹತ್ತಿರದ ಸ್ನೇಹಿತರಾಗಿದ್ದ ದಿನೇಶ್ ಮಂಗಳೂರು ಮೂಲತಃ ಶಿವಮೊಗ್ಗ ಜಿಲ್ಲೆಯ ನಗರ ಸಮೀಪದ ಸಂಪಿಕಟ್ಟೆಯವರು. ಕನ್ನಡ ಚಿತ್ರರಂಗದಲ್ಲಿ ಗುರುತಿಸಲು ಸುಲಭವಾಗುವಂತೆ ಇವರನ್ನು ಮಂಗಳೂರು ದಿನೇಶ್ ಎನ್ನುತ್ತಿದ್ದರು, ಬಳಿಕ ದಿನೇಶ ಮಂಗಳೂರು ಎಂದು ಪ್ರಖ್ಯಾತರಾಗಿದ್ದರು. ಮೃತರು ಪತ್ನಿ ಭಾರತಿ ಪೈ, ಇಬ್ಬರು ಗಂಡು ಮಕ್ಕಳಾದ ಸೂರ್ಯ ಸಿದ್ಧಾರ್ಥ, ಸಜನ್ ಪೈ ಅವರನ್ನು ಅಗಲಿದ್ದಾರೆ.