ಉಡುಪಿ: ಕಟ್ಟಡ ಕಾರ್ಮಿಕರಿಗೆ ಕೆಂಪು ಕಲ್ಲು ಮರಳು ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಆಗಸ್ಟ್ 18 ರಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಿನ್ನಲೆ ಇಂದು ಜಿಲ್ಲೆಯ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಮಣಿಪಾಲ ಟೈಗರ್ ಸರ್ಕಲ್ ಬಳಿಯಿಂದ ಬ್ರಹತ್ ಮೆರವಣಿಗೆ ನಡೆಸಿದ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿಗೆ ಚಲೋ ನಡೆಸಿ ಪ್ರತಿಭಟಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಮೆರವಣಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿ ಎರಡೂ ಗೇಟ್ ಗಳನ್ನು ಬಂದ್ ಮಾಡಲಾಗಿತ್ತು.

ಅನಂತರ ಸಭೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ; ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯದ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಶಾಸಕರು ವಿಫಲರಾಗಿದ್ದಾರೆ. ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ ಇದು ಬಡ ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ರಟ್ಟೆಯ ಬಿಟ್ಟರೆ ಆಸ್ತಿಯೇ ಇಲ್ಲದ ಕಟ್ಟಡ ಕಾರ್ಮಿಕರು ರಟ್ಟೆ ನಂಬಿ ಕುಟುಂಬ ನಿರ್ವಹಣೆಗೆ ಸಾಲ ಮಾಡಿದ್ದಾರೆ ಆದರೆ ಜಿಲ್ಲಾಡಳಿತ ಕೆಲಸವನ್ನೇ ಕಸಿದುಕೊಂಡಿದೆ ಎಂದು ಹೇಳಿದರು.

ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಗೇಟಿನ ಬಳಿ ಬರುತ್ತಿದ್ದಂತೆ ಪೋಲೀಸರು ಒಳಗೆ ಹೋಗುವುದನ್ನು ತಡೆಯಲು ಪ್ರಯತ್ನಿಸಿದರು ಆದರೆ ಹೋರಾಟಗಾರರು ಮುಂದಕೆ ಹೋದಾಗ ಗೇಟ್ ಬಂದ್ ಮಾಡಿಸಲಾಯಿತು ಈ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಪರ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಮನವಿ ಸ್ವೀಕರಿಸಲು ಮುಂದಾದರು ಆದರೆ ಪ್ರತಿಭಟನಾಕಾರರು ಕೇವಲ ಮನವಿ ಸ್ವೀಕರಿಸಿದರೆ ಸಾಲದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿ ಜಂಟಿ ಸಭೆ ನಡೆಸಲು ಆಗ್ರಹಿಸಿದರು.ಲಿಖಿತ ಭರವಸೆ ನೀಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಅವರು ಆಗಸ್ಟ್ 30 ರಂದು ಜಂಟಿ ಸಭೆ ನಡೆಸಲು ಒಪ್ಪಿ ಲಿಖಿತ ಆದೇಶ ನೀಡಿದ ನಂತರ ಧರಣಿ ವಾಪಸ್ ಪಡೆಯಲಾಯಿತು. ಹೋರಾಟದಲ್ಲಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ್ ಪಡುಕೋಣೆ, ಕಾರ್ಯದರ್ಶಿ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಸಿಐಟಿಯು ಮುಖಂಡರಾದ ಎಚ್ ನರಸಿಂಹ ಚಂದ್ರಶೇಖರ ವಿ, ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್ ಕಾಂಚನ್, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ ಶಂಕರ್ ಮೊದಲಾದವರಿದ್ದರು.