ಉಡುಪಿ: ನಿರ್ಮಾಣ ಕಾರ್ಮಿಕರು ಕೆಂಪು ಕಲ್ಲು ಮರಳು ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಎರಡು ದಿನಗಳಿಂದ ಕೆಲಸ ಕಳೆದುಕೊಂಡು ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದರು.
ಇಂದು ಕೆಂಪು ಕಲ್ಲು ಮರಳು ಸಮಸ್ಯೆ ವಿರುದ್ಧ ನಡೆಯುತ್ತಿರುವ ಎರಡನೇ ದಿನದ ಧರಣಿಯಲ್ಲಿ ಮಾತನಾಡಿದರು.

ಕೆಂಪು ಕಲ್ಲು ಕೊರತೆ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಹಾಗಾದರೆ ಕೆಂಪು ಕಲ್ಲು ಬೆಲೆ ದುಬಾರಿ ಯಾಕಾಗಿದೆ ಎಂದು ಉತ್ತರಿಸಬೇಕು. ಈಗಾಗಲೇ ನೀಡಿದ ಕಾನೂನು ಬದ್ಧ ಪರವಾನಿಗೆ ನೀಡಿದ ಕೋರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಗುಣಮಟ್ಟದ ಕಲ್ಲು ಸಿಗುವ ಹೊಸ ಸ್ಥಳದಲ್ಲಿ ಪರವಾನಿಗೆ ನೀಡಬೇಕು.ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಕಾರ್ಮಿಕರ ಸಂಘಟನೆಗಳ ಜೊತೆ ಜಂಟಿ ಸಭೆ ನಡೆಸಬೇಕು ಇಲ್ಲವಾದಲ್ಲಿ ಇನ್ನಷ್ಟು ದಿನ ಧರಣಿ ಮುಂದುವರಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಅಧ್ಯಕ್ಷರಾದ ಬಾಲಕ್ರಷ್ಣ ಶೆಟ್ಟಿ ಮಾತನಾಡಿ, ಮರಳು ಸಮಸ್ಯೆ ಬಗೆಹರಿಸಲು ಪ್ರತಿ ವರ್ಷ ಮೇ ತಿಂಗಳಲ್ಲಿ ಮುಂದಿನ ಆಗಸ್ಟ್ ತಿಂಗಳಲ್ಲಿ ಕೊರತೆಯಾಗುವ ಮರಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಮನವಿ ನೀಡಿದರೂ ಕಡೆಗಣನೆ ಮಾಡಲಾಗುತ್ತಿದೆ. ಮುಂದೆ ಕೆಂಪು ಕಲ್ಲು ಸಮಸ್ಯೆ ಜೊತೆ ಮರಳು ಸಮಸ್ಯೆಯನ್ನೂ ಜಿಲ್ಲಾಡಳಿತ ಸ್ರಷ್ಠಿ ಮಾಡಲಾಗುತ್ತದೆ ಎಂದು ಅವರು ದೂರಿದರು.

ಇದರ ವಿರುದ್ಧ ಆಗಸ್ಟ್ 20 ರಂದು ಜಿಲ್ಲೆಯ ಸಾವಿರಾರು ಕಟ್ಟಡ ಕಾರ್ಮಿಕರು ಬ್ರಹತ್ ಮೆರವಣಿಗೆ ನಡೆಸಿ ಮನವಿ ನೀಡಲಿದ್ದಾರೆ ಎಂದರು.
ಧರಣಿಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ ಶಂಕರ್ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಚಂದ್ರಶೇಖರ ವಿ, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಸುಭಾಷ್ ಚಂದ್ರ ನಾಯಕ್, ರಾಜೀವ ಪಡುಕೋಣೆ, ಕಟ್ಟಡ ಕಾರ್ಮಿಕರಾದ ರಾಮ ಕಾರ್ಕಡ, ಸಯ್ಯದ್ ಅಲಿ, ನಾಗೇಶ್ ಆಚಾರ್ಯ ಕಾರ್ಕಳ, ಸರೋಜ ಮಾತನಾಡಿದರು. ಧರಣಿಯಲ್ಲಿ ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ನಳಿನಿ, ಶಶಿಧರ ಗೊಲ್ಲ, ವಾಮನ ಪೂಜಾರಿ, ಕವಿರಾಜ್ ಎಸ್ ಕಾಂಚನ್, ಮೋಹನ, ದಯಾನಂದ ಕೋಟ್ಯಾನ್ ಮೊದಲಾದವರಿದ್ದರು.