Thursday, October 23, 2025

spot_img

ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ ಮೇಳಕ್ಕೆ ಹತ್ತು ವರ್ಷ ಒಂದು ಮಹಾನ್ ಸಾಧನೆ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಯಕ್ಷಗಾನವನ್ನು ನಾವು ಕೂತು ಚೆನ್ನಾಗಿ ಆಸ್ವಾದಿಸಬಹುದು, ಬೇಕಾಬಿಟ್ಟಿ ಟೀಕೆ ಕೂಡಾ ಮಾಡಬಹುದು. ಆದರೆ ಮೇಳಗಳನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಇದೊಂದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ ಆಚರಿಸುತ್ತಿರುವುದು ಮಹಾನ್ ಸಾಧನೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ದ್ಯುತಿಪರ್ವ ಯಕ್ಷ ಟ್ರಸ್ಟ್ ಕುಂದಾಪುರ ಹಾಗೂ ನಮ್ಮ ಕಲಾಕೇಂದ್ರ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ತಿರುಗಾಟದ ದಶಮಾನೋತ್ಸವದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶನಿವಾರ ಹಮ್ಮಿಕೊಂಡ ‘ಧ್ವಜಪುರ ಯಕ್ಷೋತ್ಸವ ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲೆ ಉಳಿಯಬೇಕಾದರೆ ಪ್ರೇಕ್ಷಕರು ಬೇಕು. ಪ್ರೇಕ್ಷಕರು ಯಕ್ಷಗಾನಕ್ಕೆ ಬರಬೇಕಾದರೆ ಅಂತಹ ಗುಣಮಟ್ಟದ ಕಾರ್ಯಕ್ರಮಗಳು, ಕಲಾವಿದರು ಇರಬೇಕು. ಹಾಸನ, ಮಂಡ್ಯ ಮೊದಲಾದ ಭಾಗದ ಮೂಡಲಪಾಯ ಯಕ್ಷಗಾನದ ಪರಿಸ್ಥಿತಿಯನ್ನು  ನೋಡಿದಾಗ ನಮ್ಮ ಪಡುವಲಪಾಯ ಯಕ್ಷಗಾನ ಎಷ್ಟೋ ಮುಂದಿದೆ. ಅಂದರೆ ಇಲ್ಲಿ ಒಳ್ಳೆಯ ಸಂಘಟನೆಗಳಿವೆ, ಮೇಳಗಳಿವೆ. ಯಕ್ಷಗಾನಕ್ಕೆ ದೇವಳ, ದಾನಿಗಳ ಪ್ರೋತ್ಸಾಹವೂ ದೊರೆಯುತ್ತಿದೆ. ವಿದ್ಯಾವಂತ ಕಲಾವಿದರು ಬಂದು ಕಲೆಯನ್ನು ಗಟ್ಟಿಗೊಳಿಸುತ್ತಿದ್ದಾರೆ. ಉತ್ತಮ ಪ್ರೇಕ್ಷಕರಿದ್ದಾರೆ. ಇದು ಯಕ್ಷಗಾನದ ಭಾಗ್ಯ ಎಂದು ಅವರು ಅಭಿಪ್ರಾಯಪಟ್ಟರು.

ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದು ಕೇವಲ ಅಕಾಡೆಮಿಯ ಕೆಲಸವಲ್ಲ, ಅದಕ್ಕೆ ನಮ್ಮನಿಮ್ಮೆಲ್ಲರ ನೆರವು ಅಗತ್ಯ. ಪ್ರಮುಖವಾಗಿ ಮಕ್ಕಳಿಗೆ ಯಕ್ಷಗಾನವನ್ನು ದಾಟಿಸಬೇಕು. ಇದು ಅವರಲ್ಲಿ ನೈತಿಕ ಪ್ರಜ್ಞೆಯನ್ನು ಮೂಡಿಸುತ್ತದೆ ಮಾತ್ರವಲ್ಲ, ಭವಿಷ್ಯದಲ್ಲಿ ಕಲಾವಿದರು, ಪ್ರೇಕ್ಷಕರ ಕೊರತೆಯಾಗದು. ಈ ನಿಟ್ಟಿನಲ್ಲಿ ಇದೀಗ ಉಡುಪಿಯ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ಹಾಗೂ ರಂಗಶಿಕ್ಷಣ ತರಬೇತಿ ನೀಡುತ್ತಿರುವುದು ನೈತಿಕ ಸಮಾಜ ನಿರ್ಮಾಣಕ್ಕೆ ಹಾಕಿರುವ ಭದ್ರ ತಳಹದಿಯಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಶ್ರೀ ಕೋಟಿಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ವಹಿಸಿದ್ದರು. ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀ ನಾರಾಯಣ ಉಪಾಧ್ಯ, ವಕೀಲ ಅಶೋಕ್ ಶೆಟ್ಟಿ ಹಂದಕುoದ, ಉದ್ಯಮಿಗಳಾದ ರಾಜೇಶ್ ಕಾವೇರಿ, ಮಾರ್ಕೋಡು ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಹಟ್ಟಿಯಂಗಡಿ ಮೇಳ ರಂಜಿತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles