ಉಡುಪಿ: ಇಂದು ಉಡುಪು ಶ್ರೀಕೃಷ್ಣನ ದರ್ಶನದಿಂದ ಭಾವುಕಳಾಗಿದ್ದೇನೆ. ಶ್ರೀಕೃಷ್ಣನನ್ನು ಅತ್ಯಂತ ಸಮೀಪದಿಂದ ಸಂದರ್ಶಿಸಿದ ಜೀವನದ ಅತ್ಯಂತ ಪುಣ್ಯದ ಕಾಲವಿದು. ನನ್ನ ಪ್ರಾರ್ಥನೆ ಒಂದೇ. ಶ್ರೀಕೃಷ್ಣನು ಭಾರತಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವದಿಸಿಲಿ. ಯುವ ಜನತೆಗಾಗಿ ಭಾರತ ಸಮೃದ್ಧವಾಗಲಿ. ರಾ ಬಂಧನದ ಈ ವಿಶೇಷ ದಿನದಂದು ಯುವ ಸಮುದಾಯ ದೇಶ ರಕ್ಷಣೆಯ ಪಣ ತೊಡಲಿ. ಭಾರತದ ಮುಂದಿರುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸ್ಥೆರ್ಯ ಮತ್ತು ಸಾಮರ್ಥ್ಯವನ್ನು ಶ್ರೀಕೃಷ್ಣ, ಎಲ್ಲ ಗುರುಗಳು ಹಾಗೂ ಭಾರತ ಮಾತೆ ಆಶೀರ್ವದಿಸಲಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಅವರು ಉಡುಪಿ ಶ್ರೀಕೃಷ್ಣ ಮಠದ ಕನಕ ಮಂಟಪದ ಬಳಿ ಪರ್ಯಾಯ ಪುತ್ತಿಗೆ ಮಠದಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಷ್ಠ ಯಾಳಿ ಹಾಗೂ ಗೀತಾಮಂದಿರದಲ್ಲಿ ಪುತ್ತಿಗೆ ವಿಶ್ವ ವಿದ್ಯಾಪಿಠವನ್ನು ಶನಿವಾರ ಉದ್ಘಾಟಿಸಿದ ಬಳಿಕ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕಡಗೋಲಿನಲ್ಲಿ ಮೊಸರು ಕಡೆದು ಬೆಣ್ಣೆ ತೆಗೆದು ಶ್ರೀಕೃಷ್ಣನಿಗೆ ಅರ್ಪಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಾತು ಆರಂಭಿಸಿದಾಗಿನಿಂದ ಕೊನೆವರೆಗೂ ಕಣ್ಣಂಚಲಿ ನೀರು ಸುರಿಸುತ್ತಲೇ ಭಾವುಕರಾಗಿ ಮಾತನಾಡುತ್ತಲೇ ಇದ್ದ ನಿರ್ಮಲಾ, ಈ ಹಿಂದೆ ನಾನು ಅದಮಾರು ಮಠದ ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಬಂದಿದ್ದೆ. ಈ ಬಾರಿ ನನಗೆ ಡಬಲ್ ಆಶೀರ್ವಾದ ಲಭಿಸಿದೆ. ಪುತ್ತಿಗೆ ಸುಗುಣೇಂದ್ರ ಶ್ರೀಗಳು ವಿಶ್ವಾದ್ಯಂತ ಶ್ರೀಕೃಷ್ಣನ ಸಂದೇಶ ಪಸರಿಸುತ್ತಿದ್ದಾರೆ. ಪ್ರತಿದಿನವೂ ಯಜ್ಞದ ರೀತಿಯಲ್ಲಿ ಕೋಟಿ ಗೀತಾ ಲೇಖನದ ಮೂಲಕ ಧರ್ಮ ಪ್ರಸಾರ, ಧರ್ಮದ ರಕ್ಷಣೆ ಮಾಡುತ್ತಿರುವ ಅನನ್ಯ ಕಾರ್ಯನ್ನು ವಿನಮ್ರವಾಗಿ ಗೌರವಿಸುತ್ತೇನೆ ಎಂದರು.

ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು, ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪುತ್ತಿಗೆ ಕಿರಿ ಯತಿ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ನಿವೃತ್ತ ನ್ಯಾಯಮೂರ್ತಿ ದಿನೇಶಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಮಿಳುನಾಡು ಉದ್ಯಮಿ ರವಿ ಸ್ಯಾಮ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು.

ಪುತ್ತಿಗೆ ಮಠದ ವಿದ್ವಾನ್ ಡಾ. ಬಿ.ಗೋಪಾಲಾಚಾರ್ಯ ಹಾಗೂ ರಘೂತ್ತಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಉಷಾ ಹೆಬ್ಬಾರ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.


