ಉಡುಪಿ: ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಯುವಜನರಲ್ಲಿ ಆತ್ಮವಿಶ್ವಾಸ ದ್ವಿಗುಣಗೊಳಿಸುವುದರೊಂದಿಗೆ, ಅವರುಗಳಲ್ಲಿ ಸ್ವಾಭಿಮಾನ ಹೆಚ್ಚಿಸಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ವತಿಯಿಂದ ನಡೆದ ಯುವನಿಧಿ ಪ್ರಚಾರ ಮತ್ತು ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯುವಜನತೆ ದೇಶದ ಆಸ್ತಿ. ದೇಶವನ್ನು ಕಟ್ಟಿ ಬೆಳೆಸುವಲ್ಲಿ ಯುವಜನರು ಮಹತ್ವದ ಪಾತ್ರ ವಹಿಸುತ್ತಾರೆ. ಆಧುನಿಕತೆಯ ನಾವೀನ್ಯತೆಯ ಉದ್ಯೋಗ ಅವಕಾಶಗಳಿಗೆ ತಕ್ಕಂತೆ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸಲು ಯುವನಿಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಮಾರುಕಟ್ಟೆಗೆ ಅಗತ್ಯವಾದ ಮಾನವ ಸಂಪನ್ಮೂಲಗಳನ್ನು ಸೃಷ್ಠಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದರು.

ಯುವನಿಧಿ ಯೋಜನೆಯಡಿ ಪದವೀಧರರು ಹಾಗೂ ಡಿಪ್ಲೋಮಾ ಹೊಂದಿರುವವರು ಉದ್ಯೋಗ ಕಂಡುಕೊಳ್ಳಲು ಎದುರಾಗುವ ಖರ್ಚು ವೆಚ್ಚಗಳಿಗೆ ಪೋಷಕರನ್ನು ಅವಲಂಭಿಸುವುದನ್ನು ತಪ್ಪಿಸಲು ಸರ್ಕಾರ ಯುವನಿಧಿ ಯೋಜನೆ ಜಾರಿಗೆ ತಂದಿದೆ. ಯುವಜನತೆಯೆ ಯೌವನ್ನದ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿ ನಿರಾಸೆಯಾಗದಂತೆ ಅವರ ಮುಂದಿನ ನಡೆಗೆ ಶಕ್ತಿ ತುಂಬುವ ಕಾರ್ಯವನ್ನು ಸರ್ಕಾರ ಈ ಯೋಜನೆ ರೂಪಿಸುವ ಮೂಲಕ ಮಾಡುತ್ತಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲೆ ಉಮಾ ಬಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿಪ್ಲೋಮಾ ಹಾಗೂ ಪದವಿ ಪಡೆದು ಹೊರಹೊಮ್ಮುವ ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯುವ ದಾರಿ ಕಷ್ಟಕರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು, ಉದ್ಯೋಗ ಅರಸಿ ವಿವಿಧೆಡೆಗೆ ತೆರಳಲು ಆಗುವ ಖರ್ಚು ವೆಚ್ಚಗಳಿಗೆ ಮನೆಯವರನ್ನು ಅವಲಂಭಿಸುವುದು ಈ ಯೋಜನೆಯಿಂದ ತಪ್ಪಿದೆ. ಅರ್ಹ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಯೋಜನೆಯಡಿ ನೋಂದಾಯಿಸಿ, ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಜೊತೆಗೆ ಮಾಹಿತಿಯನ್ನು ಇತರರಿಗೂ ಹಂಚಬೇಕು ಎಂದರು.
ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್ ಯುವನಿಧಿ ಯೋಜನೆಯಲ್ಲಿ ನೋಂದಾಯಿಸುವ ಬಗ್ಗೆ, ಉದ್ಯೋಗಕ್ಕೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಇರುವ ಯುವನಿಧಿ ಪ್ಲಸ್ ಬಗ್ಗೆ, ಉದ್ಯೋಗ ವಿನಿಮಯ ಕಚೇರಿಯಿಂದ ಆಯೋಜಿಸಲಾಗುವ ಉದ್ಯೋಗಾವಕಾಶಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸಿ ಮೋಹನ್ ನಂಬಿಯಾರ್, ಸಂಸ್ಥೆಯ ಉಪನ್ಯಾಸಕರು, ಉದ್ಯೋಗ ವಿನಿಮಯ ಕಚೇರಿಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಕಿಶೋರ್ ಕುಮಾರ್ ಸ್ಘಾಗತಿಸಿ, ಉದ್ಯೋಗ ವಿನಿಮಯ ಕೇಂದ್ರದ ದೀಕ್ಷಿತ್ ನಿರೂಪಿಸಿದರು.
ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳೀಕರಣವಾಗಿದ್ದು, ಸೇವಾಸಿಂಧು ಪೋರ್ಟಲ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಿದ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ 3,000 ರೂ ಹಾಗೂ ಡಿಪ್ಲೋಮಾ ಪಡೆದು ನಿರುದ್ಯೋಗಿಯಾಗಿರುವವರಿಗೆ 1,500 ರೂ. ಗಳನ್ನು ಪ್ರತೀ ಮಾಹೆ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಯೋಜನೆಯ ಫಲಲಾನುಭವಿಗಳು ಪ್ರತೀ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ನೀಡುವುದು ಕಡ್ಡಾಯವಾಗಿರುತ್ತದೆ.
ಅಶೋಕ್ ಕುಮಾರ್ ಕೊಡವೂರು (ಜಿಲ್ಲಾ ಅಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ)