ಉಡುಪಿ : ಇತ್ತೀಚೆಗೆ ಗಂಗೊಳ್ಳಿಯಿಂದ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಲ್ವರು ಮೀನುಗಾರರಲ್ಲಿ ಮೂವರು ಮೃತಪಟ್ಟ ಘಟನೆ ಮರೆಯಲು ಸಾಧ್ಯವಿಲ್ಲ. ಜೀವದ ಹಂಗು ತೊರೆದು ಸಮುದ್ರದ ತೆರಗಳ ಮಧ್ಯೆ ಹೋರಾಟ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುವ ಮೀನುಗಾರ ಸಮುದಾಯದ ಕಷ್ಟ ಹೇಳ ತೀರದು. ಘಟನೆಯಲ್ಲಿ ಮೂವರು ಸಮುದ್ರ ಪಾಲಾಗಿ ಮೃತಪಟ್ಟರೇ, ಓರ್ವ ಮೀನುಗಾರ ಗಂಭೀರವಾಗಿ ಕಾಲಿಗೆ ಗಾಯವಾಗಿದ್ದರು ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ್ದರು. ಮೃತ ಮೀನುಗಾರರ ಮನೆಗೆ ಸ್ಥಳೀಯರ ಶಾಸಕರು, ಮೀನುಗಾರಿಕಾ ಸಚಿವರು ಭೇಟಿ ನೀಡಿ ಸಾಂತ್ವಾನ ಹೇಳಿ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಿದ್ದರು. ಆದರೆ ಬದುಕಿ ಉಳಿದ ಮೀನುಗಾರ ಸಂತೋಷ ನಿಗೆ ಪರಿಹಾರದ ಚೆಕ್ ನೀಡುವುದು ಬಿಡಿ, ಕನಿಷ್ಠ ಸೌಜನ್ಯಕ್ಕಾದರೂ ಸಾಂತ್ವನ ಹೇಳಲು ಶಾಸಕರಾಗಲಿ, ಮೀನುಗಾರಿಕಾ ಸಚಿವರಾಗಿಲಿ ಯಾರು ಬಂದಿಲ್ಲ ..

ಇದೇ ಜುಲೈ 15ರಂದು ಗಂಗೊಳ್ಳಿ ಬಂದರಿನಿಂದ ಬೆಳಿಗ್ಗೆ ಮೀನುಗಾರಿಕೆಗೆ ಹೊರಟಿದ್ದ ಶ್ರೀ ಹಕ್ರೇಮಠ ಯಕ್ಷೇಶ್ವರಿ ಎಂಬ ಗಿಲ್ನೆಟ್ ನಾಡ ದೋಣಿ ಸಮುದ್ರ ಪ್ರಕ್ಷುಬ್ಧವಾದ ಹಿನ್ನಲೆಯಲ್ಲಿ ಮಗುಚಿತ್ತು. ಈ ಸಂದರ್ಭ ದೋಣಿಯಲ್ಲಿದ್ದ ನಾಲ್ವರು ಮೀನುಗಾರರ ಪೈಕಿ ಮೀನುಗಾರ ಸಂತೋಷ್ ಈಜಿ ದಡ ಸೇರಿದ್ದ, ಉಳಿದ ಮೂವರು ಮೀನುಗಾರರಾದ ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ ಮತ್ತು ಸುರೇಶ್ ಖಾರ್ವಿ ಹುಡುಕಾಟ ನಡೆಸಲಾಗಿತ್ತು. ಮರುದಿನ ಮುಂಜಾನೆ ಕೋಡಿ ಲೈಟ್ ಹೌಸ್ ಸಮೀಪದಲ್ಲಿ ಲೋಹಿತ್ ಖಾರ್ವಿ ಮೃತದೇಹ, ಅದೇ ದಿನ ಸಂಜೆ ವೇಳೆಗೆ ಹಳೆಅಳಿವೆ ಎಂಬಲ್ಲಿ ಜಗನ್ನಾಥ್ ಖಾರ್ವಿ ಮೃತದೇಹ ಪತ್ತೆಯಾಗಿತ್ತು. ಸುರೇಶ ಖಾರ್ವಿ ಪತ್ತೆಯಾಗಿ ತೀವ್ರ ಹುಡಕಾಟ ಮುಂದುವರಿಸಲಾಗಿತ್ತು. ಸುರೇಶ್ ಖಾರ್ವಿ ಮೃತದೇಹ ಗುರುವಾರ ಮುಂಜಾನೆ ಕುಂದಾಪುರ ಕೋಡಿ ಸೀವಾಕ್ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಇತ್ತ ಈಜಿ ದಡ ಸೇರಿದ ಸಂತೋಷ್ ಎನ್ನುವ ಮೀನುಗಾರನಿಗೆ ಘಟನೆಯ ವೇಳೆ ಗಂಭಿರವಾಗಿ ಗಾಯವಾಗಿತ್ತು. ಎಡಗಾಲಿಗೆ ಗಂಭೀರವಾಗಿ ಪೆಟ್ಟಾದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಧ ಪರಿಸ್ಥಿತಿ ಎದುರಾಗಿತ್ತು.

ಬಡತನದಲ್ಲಿ ಜೀವನ ನಡೆಸುತ್ತಿದ್ದ ಸಂತೋಷ್ ಅವರು ಹೊಟ್ಟೆಪಾಡಿಗಾಗಿ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದವರು. ಹೀಗಾಗಿ ಆಸ್ಪತ್ರೆಯ ದುಬಾರಿ ಶುಲ್ಕ ಹೊಂದಿಸಲು ಸಾದ್ಯವಾಗದೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನ ನಿತ್ಯದ ಖರ್ಚಿಗೂ ಕೂಡ ಕಷ್ಟ ಪಡುತ್ತಿರುವ ಸಂತೋಷ್ ಅವರು ಅವರಿವರ ಕೈಯಲ್ಲಿ ಸಾಲ ಪಡೆದು ಚಿಕಿತ್ಸೆ ಮುಂದುವರಿಸಬೇಕಾದ ಪರಿಸ್ಥಿತಿ ಇದೆ. ಮನೆಗೆ ಮುಖ್ಯ ಆಧಾರ ಸ್ಥಂಭವಾಗಿರುವ ಸಂತೋಷ್ ಉತ್ತಮ ಚಿಕಿತ್ಸೆಯ ಅಗತ್ಯವಿದೆ. 2-3 ವರ್ಷಗಳ ಹಿಂದೆ ಸಂತೋಷ್ ಅವರ ಅಣ್ಣ ಸತೀಶ ಅವರು ಕೂಡ ಇದೇ ರೀತಿ ಮೀನುಗಾರಿಕಾ ವೃತ್ತಿ ನಡೆಸುವಾಗಲೇ ಮೃತಪಟ್ಟಿದ್ದರು. ಆ ಬಳಿಕ ಸಂತೋಷ್ ಮತ್ತು ಅವರ ತಾಯಿ ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಾರೆ. ಸದ್ಯ ಮೀನುಗಾರಿಕೆಯೂ ಕೂಡ ಸರಿಯಾಗಿ ಇಲ್ಲದ ಕಾರಣ ಸಂತೋಷ್ ಅವರ ತಾಯಿಯೇ ಅವರಿವರಲ್ಲಿ ಕೈ ಚಾಚುವ ಸ್ಥಿತಿ ಇದೆ. ಇನ್ನು ಘಟನೆಯ ಬಳಿಕ ಬದುಕಿದ ಸಂತೋಷ್ ಪರಿಸ್ಥಿತಿಯ ಕುರಿತು ಯಾರು ಕೂಡ ಗಮನಿಸಿಲ್ಲ ಎನ್ನುವುದು ಸಂತೋಷ್ ಕುಟುಂಬದ ದೂರು. ಇದುವರೆಗೆ ಬೈಂದೂರು ಶಾಸಕ ಗಂಟಿಹೊಳೆಯವರಾಗಲಿ, ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಾಗಲಿ, ಇಲಾಖೆಯ ಅಧಿಕಾರಿಗಳಾಗಲಿ ಯಾರು ಕೂಡ ಸೌಜನ್ಯಕ್ಕಾದರೂ ಭೇಟಿ ನೀಡುವ ಪ್ರಯತ್ನ ಮಾಡಿ ಎನ್ನುವುದು ಮೀನುಗಾರ ಕುಟುಂಬದ ನೋವು.

ಒಟ್ಟಾರೆಯಾಗಿ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಪರಿಹಾರ ನೀಡಿದ ಸರಕಾರ, ಗಂಭೀರವಾಗಿ ಗಾಯಗೊಂಡು ಬದುಕುಳಿದ ಮೀನುಗಾರನನ್ನು ಮರೆತದ್ದು ಹೇಗೆ ಎನ್ನುವುದು ನಮ್ಮ ಪ್ರಶ್ನೆ. ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಸರಕಾರ ಸಾಂತ್ವಾನ ಹೇಳಿರುವುದು ಉತ್ತಮ ಬೆಳವಣಿಗೆ, ಮಾನವೀಯ ಸ್ಪಂದನೆ. ಹಾಗಾದ್ರೆ ಮೃತಪಟ್ಟವರಿಗೆ ಇರುವ ಬೆಲೆ ಬದುಕಿ ಉಳಿದ ಮೀನುಗಾರನಿಗೆ ಇಲ್ಲವೇ ??? ಸರಕಾರ ಈ ಬಡ ಮೀನುಗಾರನಿಗೆ ಪರಿಹಾರ ನೀಡುವ ಮನಸ್ಸು ಮಾಡುವುದೇ ?? ಎನ್ನುವುದಲ್ಲೆ ಮೀನುಗಾರಿಕಾ ಸಚಿವರೇ ಉತ್ತರಿಸಬೇಕು ???