Friday, June 27, 2025

spot_img

ಬಾಬು ಜಗಜೀವನ ರಾಮ್ ರವರ ಜೀವನಮೌಲ್ಯಗಳು ಸರ್ವ ಕಾಲಕ್ಕೂ ಆದರ್ಶಪ್ರಾಯವಾದುದು : ಸಂಸದ ಕೋಟಾ

ಉಡುಪಿ : ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆ, ಅಸ್ಪೃಶ್ಯತೆ, ಜಾತಿಪದ್ಧತಿ ವಿರುದ್ಧ ಹೋರಾಡಿ, ದೀನದಲಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಅವಿರತವಾಗಿ ಶ್ರಮಿಸಿದ ಸಾಮಾಜಿಕ ನ್ಯಾಯದ ಹರಿಕಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಬಾಬು ಜಗಜೀವನ ರಾಮ್ ರವರ ಜೀವನಮೌಲ್ಯಗಳು ಸರ್ವ ಕಾಲಕ್ಕೂ ಆದರ್ಶಪ್ರಾಯವಾಗಿದೆ ಎಂದು ಉಡುಪಿ-
ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಪ.ಜಾತಿ, ಪ.ಪಂಗಡಗಳ ಸಂಘಟನೆಗಳು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ರವರ 118 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.


ಹಸಿರುಕ್ರಾಂತಿಯ ಹರಿಕಾರ, ಭಾರತದ ಉಪಪ್ರಧಾನಿಯಾದ ಡಾ. ಬಾಬು ಜಗಜೀವನ ರಾಮ್ ಜನ್ಮ ದಿಚಾರಣೆಯು ಒಂದು ವಿಶಿಷ್ಠವಾದ ಕಾರ್ಯಕ್ರಮವಾಗಿದ್ದು, ಸುಮಾರು ಒಂದು ಶತಮಾನದ ಹಿಂದೆ ಸಾಮಾಜಿಕ ನ್ಯಾಯದ ಕಲ್ಪನೆಯೇ ಇಲ್ಲದೇ, ಸಮಾಜದಲ್ಲಿ ಸಮಾನತೆ ಕನಸಾಗಿದ್ದ ಸಂದರ್ಭದಲ್ಲಿ ಅಸ್ಪೃಷ್ಯತೆ, ಜಾತಿಪದ್ಧತಿ ತಾಂಡವವಾಡುತ್ತಿದ್ದಾಗ ಇವುಗಳ ವಿರುದ್ಧ ಹೋರಾಡಿ, ಸಮಾಜದಲ್ಲಿ ಸಮಾನತೆಯನ್ನು ತಂದಿದ್ದಾರೆ. ಎಲ್ಲಾ ಅವಮಾನಗಳನ್ನು ಎದುರಿಸಿ, ಆತಂಕಗಳನ್ನು ನಿವಾರಿಸಿಕೊಂಡು ಅತ್ಯಂತ ಪ್ರಮುಖ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಸಮಾಜದಲ್ಲಿ ಸಮಾನತೆಯ ಸಂಕೇತವಾದ ಸ್ಥಾನದಲ್ಲಿರುವವರಲ್ಲಿ ಜಗಜೀವನ್ ರಾಂ ಕೂಡ ಒಬ್ಬರಾಗಿದ್ದರು. ಬದುಕಿನ ಬಹು ಭಾಗವನ್ನು ಅಧಿಕಾರದಲ್ಲಿ ಕಳೆದರೂ ಸಹ ಸಮಾಜದ ಉನ್ನತಿಗಾಗಿ ತನ್ನ ಜೀವನವನ್ನು ಸಮರ್ಪಣೆ ಮಾಡಿದ್ದಾರೆ. ದೇಶದಲ್ಲಿ ಬರಗಾಲ ಬಂದ ಸಂದರ್ಭದಲ್ಲಿ ಕೃಷಿ ಮಂತ್ರಿ ಆಗಿದ್ದ ಅವರು ಯಾರೂ ಊಹಿಸದಂತಹ ರೀತಿಯಲ್ಲಿ ಆಹಾರದ ಉತ್ಪಾದನೆ ಹಾಗೂ ಆಹಾರದ ವಿತರಣೆ ಮಾಡಿದ್ದಾರೆ. ಕಾರ್ಮಿಕ ಮಂತ್ರಿಯಾಗಿದ್ದಾಗ ಸಮಾಜದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಅವರ ಸಮಕಾಲೀನರಾದ ಡಾ. ಬಾಬು ಜಗಜೀವನ ರಾಮ್ ರವರು ಕೇಂದ್ರದ ಕಾರ್ಮಿಕ ಹಾಗೂ ರಕ್ಷಣಾ ಸಚಿವರಾಗಿದ್ದಾಗ ದೂರದೃಷ್ಠಿಯಿಂದ ತೆಗೆದುಕೊಂಡ ನಿಲುವುಗಳು ಹಾಗೂ ರೂಪಿಸಿದ ಕಾನೂನುಗಳು ಆಡಳಿತ ವ್ಯವಸ್ಥೆಗೆ ಮಾದರಿಯಾಗುವಂತದ್ದು. ಬಾಬು ಜಗಜೀವನ ರಾಮ್ ರವರ ಕುರಿತು ಲೇಖನಗಳು, ಪುಸ್ತಕಗಳು, ಅವರ ಆದರ್ಶ, ಚಿಂತನೆಗಳು, ಜೀವನ ಶೈಲಿಯನ್ನು ಪ್ರತಿಯೊಬ್ಬ ಯುವ ಪೀಳಿಗೆಯು ಅವಲೋಕನ ಮಾಡುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಅಜ್ಜರಕಾಡು ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ನಿಕೇತನ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಪೌರಾಯುಕ್ತ ಡಾ.ಉದಯ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಂಘಟನೆಗಳ ಮುಖಂಡರುಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ, ಸ್ವಾಗತಿಸಿ, ವಂದಿಸಿದರು, ವಾರ್ಡನ್ ಶ್ರೀದೇವಿ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles