ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ 14 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಸಿಪಿಐ ನೇತೃತ್ವದಲ್ಲಿ ಪೊಲೀಸ್ ತನಿಖೆ ಪೂರ್ಣಗೊಂಡಿದೆ. ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಪೂರ್ವಾನುಮತಿ ಬೇಕಿತ್ತು. ಸಹಕಾರಿ ಸಚಿವರು ಸಹಿ ಹಾಕಿದ್ದು, ಒಂದೆರಡು ದಿನಗಳಲ್ಲಿ ಆದೇಶವಾಗಲಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಿರಿಯ ಮುಖಂಡ ಪತ್ರಾಪ್ ಚಂದ್ರ ಶೆಟ್ಟಿಯವರ ನೇತೃತ್ವದ ಅಹೋರಾತ್ರಿ ಧರಣಿಯ ಬಗ್ಗೆ ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಸಹಕಾರಿ ಇಲಾಖೆಯ ಡೆಪ್ಯುಟಿ ರಿಜಿಸ್ಟರ್ ಅದರ ಎಂಡಿ ಆಗಿದ್ದರು. ಹಾಗಾಗಿ ಚಾರ್ಚ್‌ಶೀಟ್ ಸಲ್ಲಿಸಲು ಸರಕಾರದ ಪೂರ್ವಾನುಮತಿ ಬೇಕಾಗುತ್ತದೆ. ಪುರ್ವಾನುಮತಿಯ ಭಾಗವಾಗಿ ಈಗಾಗಲೇ ಸಹಕಾರಿ ಸಚಿವ ರಾಜಣ್ಣ ಅವರು ಕೂಡ ಸಹಿ ಮಾಡಿದ್ದಾರೆ. ಸದ್ಯ ಕಾರ್ಯದರ್ಶಿ ಅವರಿಂದ ಆದೇಶ ನಿರೀಕ್ಷಿಸಲಾಗುತ್ತಿದೆ ಎಂದರು. ಆದೇಶ ಕೈ ಸೇರುತ್ತಿದ್ದಂತೆ ಬ್ರಹ್ಮಾವರ ಸರ್ಕಲ್ ಸಿಪಿಐ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಈಗಾಗಲೇ ನ್ಯಾಯಾಂಗ ತನಿಖೆಗೂ ಆದೇಶ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳಿರುವ ಕಾರಣ ಪೂರ್ವ ಅನುಮತಿ ಅಗತ್ಯ ಇತ್ತು. ಪ್ರತಾಪ ಚಂದ್ರ ಶೆಟ್ಟಿ ಅವರು ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಈಗ ಈ ಹಗರಣದ ತನಿಖೆ ವೇಗ ಪಡೆದುಕೊಳ್ಳಲಿದೆ ಎಂದರು.
ಬಿಜೆಪಿಯವರು ಅವರ ಪಕ್ಷದ ವಿಚಾರ ನೋಡಿಕೊಂಡರೆ ಉತ್ತಮ.ಕಾಂಗ್ರೆಸ್ ನಲ್ಲಿ ಆಗುತ್ತಿರುವ ಚರ್ಚೆಯ ಬಗ್ಗೆ ಅವರಿಗೆ ತಲೆಬಿಸಿ ಬೇಡ, ಬಿಜೆಪಿ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ನೋಡಿಕೊಳ್ಳಲಿ ಎಂದರು. ಕುಂಭಮೇಳಕ್ಕೆ ಹೋಗಿರುವುದು ತನ್ನ ವಯಕ್ತಿಕ ವಿಚಾರ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಹೆಚ್ಚಿನ ವಿವರವನ್ನು ಡಿಕೆ ಶಿವಕುಮಾರ್ ಅವರಿಂದಲೇ ಕೇಳಿ, ಎಲ್ಲದಕ್ಕೂ ಉತ್ತರ ಕೊಡಲು ಡಿಕೆ ಶಿವಕುಮಾರ್, ಶಕ್ತರಿದ್ದಾರೆ.ಡಿಕೆ ಶಿವಕುಮಾರ್ ಮಾತ್ರ ಅಲ್ಲ, ತುಂಬಾ ಜನ ನಾಯಕರು ಕುಂಭಮೇಳಕ್ಕೆ ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ನಾನು ಉತ್ತರ ಹೇಳಲು ಸಾಧ್ಯವಿಲ್ಲ, ಜನರಿಗೆ ಬೇಕಾದದ್ದು ಚರ್ಚೆ. ಆದರೆ ಬಿಜೆಪಿಯವರು ಪ್ರಶ್ನೆ ಕೇಳುವುದು ಎಷ್ಟು ಸರಿ, ಅಲ್ಲಿಯೇ ಮೂರು ಗುಂಪು ಇದೆ, ಬಣಗಳಿವೆ. ಬಿಜೆಪಿಯವರಿಗೆ ನಿಜವಾಗಿಯೂ ಶಿವಕುಮಾರ್ ಮೇಲೆ ಪ್ರೀತಿ ಇಲ್ಲ. ರಾಜಕೀಯ ಲಾಭ ಸಿಗುತ್ತಾ ನೋಡಲು ಪ್ರಯತ್ನಿಸುತ್ತಿದ್ದಾರೆ ಎಂದರು.