ಮಣಿಪಾಲ : ಕೇಂದ್ರ ಸರಕಾರ ಉಡುಪಿ ಜಿಲ್ಲೆಗೆ 2022ರಲ್ಲೇ ಮಂಜೂರುಗೊಳಿಸಿದ್ದ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಯನ್ನು ತಕ್ಷಣವೇ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಹಾಗೂ ದಿ ಕಾಮನ್ ಪೀಪಲ್ಸ್ ವೆಲ್ಫೇರ್ ಫೌಂಡೇಶನ್‌ನ ಅಧ್ಯಕ್ಷ ಜಿ.ಎ. ಕೋಟೆಯಾರ್ ನೇತೃತ್ವದಲ್ಲಿ ಇಂದು ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಸಂಘಟನೆ ಎಂಟು ವರ್ಷಗಳ ಕಾಲ ನಿರಂತರವಾಗಿ ಇಎಸ್‌ಐ ಆಸ್ಪತ್ರೆಯ ಕುರಿತಂತೆ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಕಾರ್ಮಿಕ ವಿಮಾ ಯೋಜನೆಯಡಿಯಲ್ಲಿ ಉಡುಪಿ ಜಿಲ್ಲೆಗೆ 100 ಹಾಸಿಗೆಗಳ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಮಂಜೂರಾ ಗಿತ್ತು. ಆದರೆ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಲಾಬಿಯಿಂದಾಗಿ ಅದರ ನಿರ್ಮಾಣ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ ಎಂದು ಕೋಟೆಯಾರ್ ಆರೋಪಿಸಿದರು.ಕೇಂದ್ರ ಸರಕಾರ ಹಲವು ಜಿಲ್ಲೆಗಳಿಗೆ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿತ್ತು. ಆದರೆ ಉಡುಪಿ ಮಾತ್ರ ಇನ್ನೂ ಅದು ಬಂದಿಲ್ಲ. ಇದರಿಂದಾಗಿ ಜಿಲ್ಲೆಯ ಕಾರ್ಮಿಕರಿಗೆ, ಬಡ ಜನರಿಗೆ ಹಾಗೂ ಹಿರಿಯ ನಾಗರಿಕರಿಗೆ ಇದರಿಂದ ತೊಂದರೆಯಾ ಗುತ್ತಿದೆ. ಮಂಜೂರಾದ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ತಾವು ಸತತ ಪತ್ರವ್ಯವಹಾರ ನಡೆಸುತಿದ್ದೇನೆ ಎಂದವರು ತಿಳಿಸಿದರು.

ಇಂದು ಉಪವಾಸ ಸತ್ಯಾಗ್ರಹದಲ್ಲಿ ನೂರು ಮಂದಿ ಸೇರಿರಬಹುದು. ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ಸೇರಿ ನಮ್ಮ ಹಕ್ಕನ್ನು ಕೇಳಿ ಪಡೆಯುತ್ತೇವೆ. ಮಂಜೂರಾಗಿರುವ ಆಸ್ಪತ್ರೆಯೊಂದು ಎರಡು ವರ್ಷ ಕಳೆದರೂ ಪ್ರಾರಂಭಗೊಳ್ಳದಿ ರುವುದಕ್ಕೆ ಭ್ರಷ್ಟಾಚಾರವೇ ಪ್ರಮುಖ ಕಾರಣ ಎಂದು ಕಿಡಿ ಕಾರಿದರು. ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ದರು. ಜಿ.ಎ.ಕೋಟೆಯಾರ್ ಅವರು ಉಪವಾಸ ಸತ್ಯಾಗ್ರಹದ ಕಾರಣಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ದ ಕಾಮನ್ ಪೀಪಲ್ ವೆಲ್ಫೇರ್ ಫೌಂಡೇಷನ್‌ನ ಮಹಿಳಾ ಘಟಕದ ಅಧ್ಯಕ್ಷೆ ಭಾನುಮತಿ. ಯುವ ಘಟಕದ ಪ್ರವೀಣ್ ಕುಮಾರ್, ತುಳುನಾಡ ರಕ್ಷಣಾ ವೇದಿಕೆಯ ಜಯ ಪೂಜಾರಿ, ವಿಶಾಲ್ ಅಮೀನ್, ರೋಷನ್ ಬಂಗೇರ ಮುಂತಾದವರು ಉಪಸ್ಥಿತರಿದ್ದರು.