ಉಡುಪಿ :ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಕೈಂಡ್ ಹಾರ್ಟ್ಸ್ ಬಾಳ್ಕುದು, ಶ್ರೀ ವೇಣುಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ (ಮೂಡುಕೇರಿ ಬಾರ್ಕೂರು) ಹಾಗೂ ಉಸಿರು ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಈ ವರ್ಷದ ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 23 ರಂದು ನಡೆಯುವ 5ನೇ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷೆಯಾಗಿ ಕುಮಾರಿ ಉನ್ನತಿ ಹಂದಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.

ಗುಂಡ್ಮಿ ಉಮೇಶ್ ಪೂಜಾರಿ ಹಾಗೂ ವಸಂತಿ ಪೂಜಾರಿಯವರ ಪುತ್ರಿಯಾದ ಉನ್ನತಿ, ವಿವೇಕ ಬಾಲಕಿಯರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಯಕ್ಷಗಾನ, ನಾಟಕ ಮತ್ತು ಹಾಡು ಮೊದಲಾದ ಹಲವು ಕಲಾ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆ. ಸಮ್ಮೇಳನದ ಅಂಗವಾಗಿ ಮಕ್ಕಳ ಕವಿಗೋಷ್ಠಿ, ಸಾಂಸ್ಕೃತಿಕ ಉತ್ಸವ ಹಾಗೂ ಕಾರಂತ ಬಾಲಪುರಸ್ಕಾರ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.

ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್, ಅಧ್ಯಕ್ಷ ಸತೀಶ ಕುಂದರ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೈಂಡ್ ಹಾರ್ಟ್ಸ್ನ ಸ್ಟೀಫನ್ ಲೂಯಿಸ್ ಹಾಗೂ ಶ್ರೀ ವೇಣುಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿಯ ಗಣೇಶ್ ಜಿ. ಅವರು ಉನ್ನತಿ ಅವರ ಆಯ್ಕೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.



