ಉಡುಪಿ: ಇಂದಿನ ಯಾಂತ್ರೀಕೃತ ಜೀವನದಲ್ಲೂ ಪ್ರಾಣಿಗಳಿಗೆ ಅಚ್ಚುಮೆಚ್ಚಿನ ಸ್ಥಾನ ನೀಡಿರುವ ದಂಪತಿಗಳೊಬ್ಬರು ಸಮಾಜದ ಮುಂದೆ ಮಾದರಿಯಾಗಿದ್ದಾರೆ. ಪರ್ಕಳ ಅತ್ಯುತನಗರ ನಿವಾಸಿಗಳಾದ ಕೆ.ಆರ್. ಅಶೋಕ್ ಮತ್ತು ಅವರ ಪತ್ನಿ ಶಶಿಕಲಾ ಕಳೆದ 14 ವರ್ಷಗಳಿಂದ ನಿರಂತರವಾಗಿ ಬೀಡಾಡಿ ದನಗಳ ಆರೈಕೆ ಹಾಗೂ ಗೋಸೇವೆ ನಡೆಸುತ್ತಿದ್ದಾರೆ.

ಬೆಳಿಗ್ಗೆ ಎದ್ದು ಕೆಲವರಿಗೆ ಸುಪ್ರಭಾತ ಕೇಳುವುದು ಹವ್ಯಾಸವಾದರೆ, ಈ ದಂಪತಿಗೆ ದಿನದ ಪ್ರಾರಂಭವೇ ಗೋಸೇವೆಯಿಂದ ಆರಂಭವಾಗುತ್ತದೆ. ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಸುತ್ತಮುತ್ತಲಿನ ಬೀಡಾಡಿ ದನಗಳು — ಹೋರಿ, ಬಸುರಿ ದನಗಳು ಹಾಗೂ ಕರುಗಳು ಸೇರಿ ಸುಮಾರು 14 ದನಗಳು ಇವರ ಮನೆ ಮುಂದೆ ಹಾಜರಾಗುತ್ತವೆ. ಅಶೋಕ್ ಮತ್ತು ಶಶಿಕಲಾ ದಂಪತಿಗಳು ಅವುಗಳಿಗೆ ಆಹಾರ ನೀಡಿ, ಸ್ನಾನ ಮಾಡಿಸಿ, ಹೂಹಾರ ಅಲಂಕರಿಸಿ ಗೋಪೂಜೆ ನಡೆಸುತ್ತಾರೆ. ಗೋವುಗಳನ್ನು ದೇವರ ರೂಪವಾಗಿ ಕಾಣುವ ಇವರ ಸೇವಾಭಾವ ಎಲ್ಲರಿಗೂ ಮಾದರಿಯಾಗಿದೆ.

ಈ ಬಗ್ಗೆ ಅಶೋಕ ಅವರ ಬಳಿ ಕೇಳಿದಾಗ, ನಾನು ಪರಮಾತ್ಮನನ್ನು ಗೋವುಗಳ ಮೂಲಕ ಕಾಣುತ್ತೇನೆ. ಬೀಡಾಡಿ ದನಗಳಿಗೆ ಆಹಾರ ಸಿಗುವುದಿಲ್ಲ, ಅವರ ಹಸಿವಿಗೆ ಸ್ಪಂದಿಸುವುದು ನಮ್ಮ ಧರ್ಮ. ಅವು ತೃಪ್ತಿಯಿಂದ ಊಟ ಮಾಡಿದರೆ, ಅದು ನಮಗೆ ಶ್ರೀರಕ್ಷೆ ಮತ್ತು ಸಂತೋಷ ತರುತ್ತದೆ ಎನ್ನುತ್ತಾರೆ.

ಈ ಗೋಸೇವೆಯಲ್ಲಿ ದಂಪತಿಯ ಪುತ್ರಿಯರೂ ಸಹ ಕೈಜೋಡಿಸಿದ್ದು, ಸ್ಥಳೀಯರಿಂದ ಸಹ ಅಲ್ಪಸ್ವಲ್ಪ ಸಹಕಾರ ದೊರಕುತ್ತಿದೆ. ದನಗಳಿಗೆ ನೀಡುವ ಆಹಾರವನ್ನು ಕೆಲವರು ದಾನವಾಗಿ ನೀಡುತ್ತಾರೆ. ಇದಲ್ಲದೆ, ಮುಂದೆ ಬೀಡಾಡಿ ದನಗಳಿಗೆ ಆಹಾರ ನೀಡುವ ಟ್ರಸ್ಟ್ ಸ್ಥಾಪಿಸುವ ಯೋಜನೆಯನ್ನೂ ಈ ದಂಪತಿ ಹೊಂದಿದ್ದಾರೆ. 365 ದಿನವೂ ನಿರಂತರವಾಗಿ ನಡೆಯುತ್ತಿರುವ ಇವರ ಗೋಸೇವೆ — ನಿಸ್ವಾರ್ಥತೆ, ಭಕ್ತಿ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯಾಗಿದೆ.
