ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ʼಭ್ರೂಣದೊಳಗೆ ಭ್ರೂಣʼ ಇರುವುದು ಪತ್ತೆಯಾಗಿದೆ. ಇದೊಂದು ವೈದ್ಯಕೀಯ ಲೋಕಕ್ಕೆ ವಿಸ್ಮಯ ಎನ್ನಲಾಗಿದೆ. ಮಹಿಳೆಗೆ ಹೆರಿಗೆಯಾದ ನಂತರ ಮೂರು ದಿನದ ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳನ್ನು ವೈದ್ಯರು ಯಶಸ್ವಿಯಾಗಿ ಹೊರಗೆ ತೆಗೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬುಲ್ಧಾನದ ಮಹಿಳೆಯ (32 ವರ್ಷ) ಗರ್ಭದಲ್ಲಿದ್ದ ಈ ಮಗು ಅಪರೂಪದ ಜನ್ಮಜಾತ ವೈಪರೀತ್ಯ ಪತ್ತೆಯಾಗಿತ್ತು. ಹೆರಿಗೆಯ ಮೊದಲು ಮಹಿಳೆ ಆರೋಗ್ಯ ತಪಾಸಣೆಗೆಂದು ಸೋನೋಗ್ರಫಿಗೆ ಒಳಗಾದಾಗ, ಭ್ರೂಣದ ದೇಹದೊಳಗೆ ವಿರೂಪಗೊಂಡ ಭ್ರೂಣಗಳು ಇರುವುದು ಕಂಡು ಬಂದಿದೆ. ಅನಂತರ ಮಹಿಳೆ ಫೆ.1 ರಂದು ಬುಲ್ಧಾನ ಮಹಿಳಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ನಂತರ ಅಮರಾವತಿ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಸರಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಅಲ್ಲಿ ನುರಿತ ವೈದ್ಯರು ನವಜಾತ ಶಿಶುವಿನ ಹೊಟ್ಟೆಯಿಂದ ಎರಡು ಭ್ರೂಣಗಳನ್ನು ತೆಗೆದು ಹಾಕಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.