ಉಡುಪಿ : ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಿಗಳು ಪರ್ಯಾಯವಾಗಿ ಕಟ್ಟಿಗೆ ಹಾಗೂ ವಿದ್ಯುತ್ ಉರುವಲುಗಳ ಬಳಕೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು.

ಅವರು ಶುಕ್ರವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಸರಬರಾಜು ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ವಾಣಿಜ್ಯ ಬಳಕೆಯ ಅನಿಲವು ಬಹುತೇಕವಾಗಿ ವಿದೇಶಗಳಿಂದ ಆಮದು ಆಗುತ್ತಿರುವುದರಿಂದ ಯುದ್ಧ ಪರಿಸ್ಥಿತಿಯ ಕಾರಣದಿಂದ ನಿರ್ದಿಷ್ಟ ಪ್ರಮಾಣದಲ್ಲಿ ಆಮದು ಆಗದೆ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆಗೆ ತಾತ್ಕಾಲಿಕವಾಗಿ ಪರ್ಯಾಯ ಉರುವಲುಗಳ ಬಳಕೆ ಒಂದೇ ಮಾರ್ಗವಾಗಿದೆ ಎಂದು ಹೇಳಿದರು.

ಜಿಲ್ಲೆಯ ಕೆಲವು ಹೋಟೆಲ್ ಉದ್ಯಮಿಗಳು ಈಗಾಗಲೇ ಕಟ್ಟಿಗೆ ಸೇರಿದಂತೆ ಇತರೆ ಉರುವಲುಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ಇತರ ಹೋಟೆಲ್ ಉದ್ಯಮಿಗಳೂ ಇದಕ್ಕೆ ಒತ್ತು ನೀಡಬೇಕು. ಹೀಗೆ ಮಾಡಿದಲ್ಲಿ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಉದ್ಯೋಗವೂ ಮುಂದುವರಿಯುತ್ತದೆ. ಪ್ರಸ್ತುತ ಸಮಸ್ಯೆ ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ಸರಬರಾಜು ವ್ಯವಸ್ಥೆ ಸುಧಾರಿಸಬಹುದು ಎಂದರು.

ಸಭೆಯಲ್ಲಿ ಸಾಮಿಲ್ ಮಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಹೋಟೆಲ್ ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ ಸಾಮಿಲ್‌ಗಳಲ್ಲಿ ಲಭ್ಯವಿರುವ ಕಟ್ಟಿಗೆಗಳನ್ನು ಪ್ರಸ್ತುತ ಇರುವ ದರದಲ್ಲೇ ಯಾವುದೇ ಬೆಲೆ ಏರಿಕೆ ಮಾಡದೇ ಮಾರಾಟ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರವೀಂದ್ರ, ಸಾಮಿಲ್ ಮಾಲಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.



