ಉಡುಪಿ : ಮಗು ಹೊಟ್ಟೆಯಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ ಘಟನೆ ಮಣಿಪಾಲದಲ್ಲಿ ವರದಿಯಾಗಿದೆ. ಮೃತರನ್ನು ಬೈಂದೂರು ಶಿರೂರಿನ ನಾಗರತ್ನ (32) ಎಂದು ಗುರುತಿಸಲಾಗಿದೆ. ಇವರು ತಮ್ಮ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದರು.

ಅಕ್ಟೋಬರ್ 14ರಂದು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಬಂದಿದ್ದ ನಾಗರತ್ನ ಅವರನ್ನು ಪರೀಕ್ಷಿಸಿದ ವೈದ್ಯರು, ಮಗು ಹೊಟ್ಟೆಯೊಳಗೇ ಮೃತಪಟ್ಟಿದೆ ಎಂದು ತಿಳಿಸಿದ್ದರು. ನಂತರ ಮಗುವನ್ನು ಹೆರಿಗೆ ಮಾಡಿಸಿ ಹೊರತೆಗೆದಷ್ಟೇ ಸಾಧ್ಯ ಎಂದು ವೈದ್ಯಕೀಯ ಸಲಹೆ ನೀಡಿದ್ದರು. ಅದರಂತೆ ಅವರನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅಕ್ಟೋಬರ್ 16ರ ಬೆಳಗಿನ ಜಾವ, ಐಸಿಯುಗೆ ಕರೆದುಕೊಂಡು ಹೋದ ವೇಳೆ ನಾಗರತ್ನ ಬಾತ್‌ರೂಮ್‌ನಲ್ಲಿ ಬಿದ್ದು ರಕ್ತಸ್ರಾವಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.