ಬ್ರಹ್ಮಾವರ: ಹೇರಾಡಿ ಗ್ರಾಮದ ಕೂಡ್ಲಿ ಪ್ರದೇಶದ ಸರ್ಕಾರಿ ಜಾಗದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಮೇಲೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಪ್ರಶಾಂತ್ ಮತ್ತು ರಾಘವೇಂದ್ರ ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಹಿನ್ನಲೆಯಲ್ಲಿ ಧಾಳಿ ನಡೆಸಿದಾಗ, ಸರಕಾರಿ ಜಾಗದಲ್ಲಿ ಕೋಳಿಗಳ ಕಾಲಿಗೆ ಕತ್ತಿಗಳನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ಆಡುತ್ತಿರುವುದು ಪತ್ತೆಯಾಗಿದೆ. ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಕಂಡು ಹೆಚ್ಚಿನವರು ಓಡಿಹೋಗಿದ್ದು, ಇಬ್ಬರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಆಟಕ್ಕೆ ಬಳಸಿದ ನಗದು, 2 ಕೋಳಿಗಳು, ಕೋಳಿ ಬಾಳ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಧಾಳಿ ವೇಳೆ ಲೋಕೇಶ್, ವಿಜೇತ, ಅಭಿ, ಅರುಣ್ ಶೆಟ್ಟಿ ಹಾಗೂ ಇನ್ನಿತರರು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಕಾರ್ಯ ಮುಂದುವರಿದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.