ಕುಂದಾಪುರ : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಮತ್ತು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕಿರಿಮಂಜೇಶ್ವರ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಅತ್ಯಂತ ಅದ್ದೂರಿಯಾಗಿ ಹೆಮ್ಮಾಡಿಯ ಜನತಾ ಕ್ರೀಡಾoಗಣದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಲೋಕೇಶ್ ಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರು ಮತ್ತು ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರವರು ಮಾತನಾಡಿ ಶಿಕ್ಷಣವೆಂದರೆ ಕೇವಲ ಅಂಕಗಳಿಕೆಯಲ್ಲ. ಉತ್ತಮವಾದ ಶೈಕ್ಷಣಿಕ ಸಾಧನೆಗಳೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಪರಿಣತರನ್ನಾಗಿಸುವುದೇ ನೈಜ ಶಿಕ್ಷಣವಾಗಿದೆ. ನಮ್ಮ ಗ್ರಾಮೀಣ ಭಾಗದ ಪ್ರತಿಭೆಗಳ ಪ್ರತಿಭೆಯ ಅನಾವರಣಕ್ಕೆ ನಾವು ಸದಾ ಬದ್ಧರಾಗಿದ್ದೇವೆ ಎಂದರು.

ಕ್ರೀಡಾಕೂಟದ ಅಂಗವಾಗಿ ಹೆಮ್ಮಾಡಿಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ 2 ಕಿ ಮೀ ಅಂತರದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನವರೆಗೆ ಪುರಮೆರವಣಿಗೆಯನ್ನು ನಡೆಸಲಾಯಿತು. ಯಕ್ಷಗಾನ, ಹುಲಿವೇಷ, ಟ್ಯಾಬ್ಲೋ ಗಳು, ಕಳಶಧಾರಿಗಳು, ಚಂಡೆ ಮತ್ತು ವಿವಿಧವಾದ್ಯವೃಂದಗಳು ಜನಮನ ಸೂರೆಗೊಂಡವು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶೇಖರ ಖಾರ್ವಿ ಧ್ವಜರೋಹಣಗೈದರು. ಇದೇ ಸಂದರ್ಭದಲ್ಲಿ ಬೈಂದೂರು, ಕಾರ್ಕಳ, ಬ್ರಹ್ಮಾವರ, ಕುಂದಾಪುರ ಮತ್ತು ಉಡುಪಿ ತಾಲ್ಲೂಕಿನ ಕ್ರೀಡಾಪಟುಗಳ ಪಥ ಸಂಚಲನ ಆಕರ್ಷಕವಾಗಿದ್ದು, ಉದ್ಯಮಿಗಳಾದ ಸುರೇಶ ಕಾಂಚನ್ ಕ್ರೀಡಾಪಟುಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿಯವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಶೇಖರ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಉದ್ಯಮಿ ಸುರೇಶ್ ಕಾಂಚನ್, ಉಡುಪಿ ಜಿಲ್ಲೆಯ ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್, , ಬೈಂದೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿಜಯಕುಮಾರ ಶೆಟ್ಟಿ, ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರ ಕಾರಂತ, ಉಡುಪಿಯ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರವೀಂದ್ರ ನಾಯ್ಕ, ಬ್ರಹ್ಮಾವರ ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಿತ್ಯಾನಂದ ಶೆಟ್ಟಿ, ಕುಂದಾಪುರ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸತ್ಯನಾರಾಯಣ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಿಜಯಕುಮಾರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ದೈಹಿಕ ಶಿಕ್ಷಣ ಅಧಿಕಾರಿ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕರಾದ ಉದಯ್ ನಾಯ್ಕ ನಿರೂಪಿಸಿದರು.ವಿವಿಧ ಸಂಸ್ಥೆಗಳ ದೈಹಿಕ ಶಿಕ್ಷಕರು, ಜನತಾ ಸಮೂಹ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ವರ್ಗದವರು, ಊರಿನ ಕ್ರೀಡಾಭಿಮಾನಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು


