ಆರ್ಥಿಕವಾಗಿ ನಾಗಾಲೋಟದಲ್ಲಿರುವ ದೇಶದಲ್ಲಿ ಪ್ರತಿಯೊಬ್ಬರೂ ಆರ್ಥಿಕ ಸ್ವಾವಲಂಬನೆಯತ್ತಲೇ ಗಮನ ಹರಿಸುತ್ತಿರುವುದರಿಂದ ಮನೆಯಲ್ಲಿರುವ ತಂದೆ-ತಾಯಿ, ಅತ್ತೆ-ಮಾವ ಅಥವಾ ವಯಸ್ಸಾದ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಯಾರೂ ತಯಾರಿರುವುದಿಲ್ಲ. ವಿಭಕ್ತ ಕುಟುಂಬಗಳು, ಶಿಥಿಲಗೊಳ್ಳುತ್ತಿರುವ ಸಂಬಂಧಗಳು, ಆರ್ಥಿಕ ನಿರ್ಬಂಧಗಳಿಂದಾಗಿ ಮಕ್ಕಳು ತಮ್ಮ ಹೆತ್ತವರ ಪಾಲನೆ ಪೋಷಣೆ ಮಾಡಲು ಹಿಂದೇಟು ಹಾಕುತ್ತಿವುದು ಕಂಡುಬರುತ್ತಿದ್ದು, ಸಮಾಜದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವರಂತೂ ವೃದ್ದ ಪಾಲಕರನ್ನು ಸಾಮಾಜಿಕ ಸ್ಥಳಗಳಲ್ಲಿ ಬಿಟ್ಟು ಹೋಗುವ ಘಟನೆಗಳೂ ನಡೆಯುತ್ತವೆ. ಇಂತಹ ಅಮಾನವೀಯ ಘಟನೆಗಳನ್ನು ತಡೆಯಲು ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ- ಪೋಷಣೆ ಮತ್ತು ಕಲ್ಯಾಣ ಕಾಯಿದೆ 2007 ಅನ್ನು ಜಾರಿಗೆ ತರಲಾಗಿದೆ. ಹಿರಿಯ ನಾಗರಿಕರಿಗೆ ಭಾರತೀಯ ಕಾನೂನಿನ ಅಡಿಯಲ್ಲಿ ನ್ಯಾಯ ಒದಗಿಸುವ ಈ ಕಾಯಿದೆಯ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆಯಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದೆ.
ಏನಿದು ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ- ಪೋಷಣೆ ಮತ್ತು ಕಲ್ಯಾಣ ಅಧಿನಿಯಮ 2007?
ಭಾರತೀಯ ಕಾನೂನಿನ ಪ್ರಕಾರ ಎಲ್ಲ ವ್ಯಕ್ತಿಗಳು ತಮ್ಮ ತಂದೆ-ತಾಯಂದಿರನ್ನು ನೋಡಿಕೊಳ್ಳಬೇಕು ಮತ್ತು ಅವರಿಗೆ ಆಸರೆಯಾಗಬೇಕು. ತಂದೆ-ತಾಯಂದಿರು ಜೈವಿಕವಾಗಿರಬಹುದು, ಮಲ ತಂದೆ-ತಾಯಿ ಆಗಿರಬಹುದು, ಅಥವಾ ದತ್ತು ತಂದೆ-ತಾಯಿ ಆಗಿರಬಹುದು. ತಂದೆ- ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ- ಪೋಷಣೆ ಮತ್ತು ಕಲ್ಯಾಣ ಕಾಯಿದೆ 2007ರ ಅಡಿಯಲ್ಲಿ ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟವರು) ಅವರ ವಯಸ್ಕ ಮಕ್ಕಳು ಅಥವಾ ಕಾನೂನಾತ್ಮಕ ಉತ್ತರಾಧಿಕಾರಿಗಳಿಂದ ಜೀವನಾಂಶ ಪಡೆಯಲು ಟ್ರಿಬ್ಯೂನಲ್ ಗೆ ಅರ್ಜಿ ಸಲ್ಲಿಸಬಹುದು. ಅವರು ತಮ್ಮನ್ನು ತಾವೇ ನೋಡಿಕೊಳ್ಳಲು ಅಸಮರ್ಥರಾಗಿದ್ದಲ್ಲಿ ಇಂತಹ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ತಂದೆ-ತಾಯಿಗೆ ಕೊಡಬೇಕಾದ ಜೀವನಾಂಶದ ಮೊತ್ತ ಎಲ್ಲರಿಗೂ ಸಮನಾಗಿರುವಂತೆ ಕಾನೂನು ನಿಗದಿಪಡಿಸಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಈ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಈ ಕೆಳಗಿನ ಅಂಶಗಳ ಮೇಲೆ ನ್ಯಾಯಾಲಯವು ಜೀವನಾಂಶದ ಮೊತ್ತವನ್ನು ನಿಗದಿಪಡಿಸುತ್ತದೆ:
Ø ಮಕ್ಕಳ/ಉತ್ತರಾಧಿಕಾರಿಯ ಅಂತಸ್ತು ಅಥವಾ ಜೀವನದ ಗುಣಮಟ್ಟ
Ø ಹಿರಿಯರ ಅವಶ್ಯಕತೆಗಳು (ಸಮಂಜಸವಾಗಿ ಲೆಕ್ಕ ಹಾಕಲಾಗುತ್ತದೆ)
Ø ಹಿರಿಯರು ತಮ್ಮ ಮಕ್ಕಳು/ಉತ್ತರಾಧಿಕಾರಿಯಿಂದ ಬೇರೆಯಾಗಿ ವಾಸಿಸುತ್ತಿದ್ದಾಗ
Ø ಮಕ್ಕಳ/ಉತ್ತರಾಧಿಕಾರಿಗಳ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
Ø ಹಿರಿಯರ ಆದಾಯ, ಸಂಪತ್ತು, ಮತ್ತು ಆಸ್ತಿಯ ಮೌಲ್ಯ
Ø ಜೀವನಾಂಶ ಪಡೆಯಬೇಕಾದ ಒಟ್ಟು ವ್ಯಕ್ತಿಗಳು, ಇತ್ಯಾದಿ.
ಹಿರಿಯ ನಾಗರಿಕರಿಗೆ ಜೀವನಾಂಶ:
ಹಿಂದೂ ದತ್ತು ಮತ್ತು ಜೀವನಾಂಶ ಕಾಯಿದೆಯಡಿ ಯಾವುದೇ ಹಿಂದೂ, ಬೌಧ್ಧ, ಜೈನ, ಅಥವಾ ಸಿಖ್ ಧರ್ಮಕ್ಕೆ ಸೇರಿದ, ವಯಸ್ಸಾದ/ಅಶಕ್ತ, ಜೈವಿಕ ಅಥವಾ ದತ್ತು ತಂದೆ-ತಾಯಂದಿರು, ಅವರ ಗಳಿಕೆ ಮತ್ತು ಆಸ್ತಿಯಿಂದ ಜೀವನ ನಡೆಸಲು ಅಸಾಧ್ಯವಾದಾಗ ತಮ್ಮ ವಯಸ್ಕ ಮಕ್ಕಳಿಂದ ಜೀವನಾಂಶ ಪಡೆಯಬಹುದು. ಇದಲ್ಲದೆ, ಅವರ ಮಗ ಅಥವಾ ಮಗಳು ತೀರಿಹೋದಲ್ಲೂ ಕೂಡ, ಅವರ ಬಿಟ್ಟು ಹೋದ ಆಸ್ತಿ ಮತ್ತು ಸಂಪತ್ತಿನಲ್ಲಿ ಜೀವನಾಂಶದ ಹಕ್ಕು ತಂದೆ-ತಾಯಂದಿರಿಗೆ ಇರುತ್ತದೆ.
ಹಿರಿಯ ನಾಗರಿಕರಿಗಾಗಿ ಸಹಾಯವಾಣಿ ಕೇಂದ್ರ:
ಹಿರಿಯ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರವು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು 2014-15 ರಿಂದಲೇ ಪ್ರಾರಂಭಿಸಿದ್ದು, ಇದು 24*7 ಗಂಟೆ ಕಾರ್ಯ ನಿರ್ವಹಿಸುತ್ತಿದೆ. ಈ ಸಹಾಯವಾಣಿ ಕೇಂದ್ರವು ಉಡುಪಿಯ ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಟೋಲ್ ಫ್ರೀ ನಂಬರ್ 1090 ಅಥವಾ ದೂ.ಸ:0820- 2526394 ಗೆ ಕರೆ ಮಾಡಿದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ನೆರವು ಒದಗಲಿದೆ. ಈ ಕೇಂದ್ರದಲ್ಲಿ ಕಾನೂನು ಸಲಹೆ, ಪೊಲೀಸ್ ನೆರವು, ಸಮಾಲೋಚನೆ, ಮನೆ ಭೇಟಿ ಮತ್ತಿತರ ವಿವಿಧ ರೀತಿಯ ಸೇವೆಗಳನ್ನು ನೀಡಲಾಗುತ್ತಿದೆ.
ಪ್ರತೀ ಉಪವಿಭಾಗದಲ್ಲಿ ಕಂದಾಯ ವಿಭಾಗೀಯ ಅಧಿಕಾರಿಯ ಅಧ್ಯಕ್ಷತೆಯಲ್ಲಿ ನ್ಯಾಯ ಮಂಡಳಿಯನ್ನು ರಚಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಪೋಷಕರು ತಮ್ಮ ಮಕ್ಕಳು ಯಾ ಕಾನೂನು ಬದ್ಧ ಉತ್ತರಾಧಿಕಾರಿಗಳಿಂದ ಜೀವನಾಂಶ ಮೊತ್ತವನ್ನು ಪಡೆಯಲು ಸಹಾಯ ಮಾಡುತ್ತದೆ. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ನಿರ್ವಹಣಾ ಹಾಗೂ ಸಂಧಾನ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ನ್ಯಾಯ ಮಂಡಳಿಯ ಆದೇಶಗಳ ವಿರುದ್ಧ ಮೇಲ್ಮನವಿಗಳನ್ನು ಆಲಿಸಲು ಪ್ರತೀ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಮೇಲ್ಮನವಿ ನ್ಯಾಯ ಮಂಡಳಿಯನ್ನು ರಚಿಸಲಾಗಿದೆ. ಹಿರಿಯ ನಾಗರಿಕರು ತಮ್ಮ ಸ್ವಂತ ಗಳಿಕೆಯಿಂದ ಅಥವಾ ತನ್ನ ಒಡೆತನದ ಆಸ್ತಿಯಿಂದ ತನ್ನನ್ನು ತಾನು ನಿರ್ವಹಿಸಲು ಸಾಧ್ಯವಾಗದ ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಮಕ್ಕಳು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳಿಂದ ಜೀವನಾಂಶ ಮೊತ್ತವನ್ನು ಪಡೆಯಲು ಕಾಯಿದೆಯ ಸೆಕ್ಷನ್ 5 ರ ಅಡಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ತಿಂಗಳಿಗೆ 10,000 ರೂ. ವರೆಗೆ ಗರಿಷ್ಠ ನಿರ್ವಹಣಾ ಭತ್ಯೆ ನೀಡಲು ನ್ಯಾಯಾಲಯವು ಆದೇಶಿಸಬಹುದು. ವಿಚಾರಣೆ ಬಾಕಿ ಇರುವಾಗ ನ್ಯಾಯ ಮಂಡಳಿಯು ಮಧ್ಯಂತರ ನಿರ್ವಹಣೆಗಾಗಿ ಮಾಸಿಕ ಭತ್ಯೆಯನ್ನು ನೀಡುವಂತೆ ಆದೇಶಿಸಬಹುದು. ಹಿರಿಯ ನಾಗರಿಕರ ಆರೈಕೆ ಮತ್ತು ರಕ್ಷಣೆ ಜವಾಬ್ದಾರಿಯುತ ವ್ಯಕ್ತಿಗಳು ಅವರನ್ನು ಕೈಬಿಟ್ಟರೆ ಅಂತಹ ವ್ಯಕ್ತಿಗಳಿಗೆ 3 ತಿಂಗಳು ಜೈಲು ಶಿಕ್ಷೆ ಅಥವಾ 5,000 ರೂ ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಹಿರಿಯ ನಾಗರಿಕರ ಆಸ್ತಿ ಮರು ವರ್ಗಾವಣೆ:
ಈ ಕಾಯಿದೆ ಜಾರಿಗೆ ಬಂದ ನಂತರ ಹಿರಿಯ ನಾಗರಿಕರ ಆಸ್ತಿಯನ್ನು ಮೋಸ, ಒತ್ತಾಯ ಹಾಗೂ ಅನುಚಿತ ಪ್ರಭಾವ ಬೀರುವ ಮೂಲಕ ಮಕ್ಕಳು ಯಾ ಅವರ ಉತ್ತರಾಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಹಾಗೂ ಮೂಲಭೂತ ವಾಸ್ತವಿಕ ಅಗತ್ಯತೆಗಳನ್ನು ಒದಗಿಸತಕ್ಕದೆಂಬ ಷರಿತ್ತಿಗೊಳಪಟ್ಟು ದಾನದ ರೂಪದಲ್ಲಿ ಅಥವಾ ಬೇರೆ ಯಾವುದೇ ರೀತಿಯ ವರ್ಗಾವಣೆ ಮಾಡಿದ್ದಲ್ಲಿ ಈ ಅಗತ್ಯತೆಗಳನ್ನು ಒದಗಿಸಲು ವಿಫಲನಾದಲ್ಲಿ ವರ್ಗಾವಣೆಕಾರರ ಇಚ್ಛೆಗನುಗುಣವಾಗಿ ಆ ವರ್ಗಾವಣೆಯನ್ನು ಶೂನ್ಯವೆಂದು ಘೋಷಿಸುವುದರೊಂದಿಗೆ ಅವರ ಆಸ್ತಿಯನ್ನು ಮರಳಿ ಪಡೆಯಲು ಅವಕಾಶ ಒದಗಿಸಲಾಗಿದೆ.
ವೈದ್ಯಕೀಯ ನೆರವು:
ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದ್ದು, ಸರ್ಕಾರಿ ಆಸ್ಪತ್ರೆ, ಸರ್ಕಾರದ ನೆರವಿನಿಂದ ನಡೆಯುತ್ತಿರುವ ಆಸ್ಪತ್ರೆಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಹಿರಿಯ ನಾಗರಿಕರಿಗೆ ಹಾಸಿಗೆಗಳನ್ನು ಒದಗಿಸಲು, ಹೊರ ರೋಗಿಗಳ ವಿಭಾಗದಲ್ಲಿ ಪ್ರತ್ಯೇಕ ಸರತಿ ಸಾಲುಗಳು, ದೀರ್ಘಕಾಲಿಕ, ಮಾರಣಾಂತಿಕ ಹಾಗೂ ದಿನೇ ದಿನೇ ದೈಹಿಕ ಶಕ್ತಿ ಕ್ಷೀಣಿಸುವಂತೆ ಮಾಡುವ ಕಾಯಿಲೆಗಳ ಚಿಕಿತ್ಸೆಗಾಗಿ ಸೌಲಭ್ಯ, ಮುಪ್ಪಾದವರಿಗೆ ಬರುವ ದೀರ್ಘಕಾಲೀನ ಕಾಯಿಲೆಗಳ ಬಗ್ಗೆ, ಮುಪ್ಪಾಗುವ ಬಗ್ಗೆ ಸಂಶೋಧನಾ ಚಟುವಟಿಕೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗುವುದು. ಆರೋಗ್ಯ ಮತ್ತು ಕು.ಕ.ಇಲಾಖೆ ಮೂಲಕ ಜಿಲ್ಲಾಸ್ಪತ್ರೆಗಳಲ್ಲಿ ಜೀರಿಯಾಟಿಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದಲ್ಲಿ ಉಚಿತವಾಗಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗಿತ್ತಿದೆ. ಪ್ರಸ್ತುತ ಉಡುಪಿಯಲ್ಲಿ 10 ಹಾಸಿಗೆಗಳ ಜೀರಿಯಾಟಿಕ್ ವಾರ್ಡ್ ವ್ಯವಸ್ಥೆ
ಮಾಡಲಾಗಿದೆ.

ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ:
ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಪಡೆಯಲು ಬಯಸುವ ಹಿರಿಯರು ಆಯಾ ತಾಲೂಕಿನ ತಹಸೀಲ್ದಾರರ ಕಛೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಬಸ್ ಪ್ರಯಾಣ ದರದಲ್ಲಿ ರಿಯಾಯತಿ:
60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬಸ್ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ಇದ್ದು, ಹಿರಿಯ ನಾಗರಿಕರ ಗುರುತಿನ ಚೀಟಿ, ಆಧಾರ್ ಕಾರ್ಡ್, ಚುನಾವಣಾ ಕಾರ್ಡ್ ಅಥವಾ ರಾಜ್ಯ ಸಾರಿಗೆ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿಗಳನ್ನು ಹೊಂದಿದ್ದಲ್ಲಿ ರಿಯಾಯತಿ ಪಡೆಯಬಹುದಾಗಿದೆ.
ವೃದ್ಧಾಶ್ರಮಗಳು:
ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲೆಗೊಂದರಂತೆ ವೃದ್ದಾಶ್ರಮಗಳನ್ನು ನಡೆಸಲು ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನವನ್ನು ಒದಗಿಸುತ್ತಿದೆ. 25 ವೃದ್ದರಿರುವ 1 ವೃದ್ಧಾಶ್ರಮಕ್ಕೆ ವಾರ್ಷಿಕ 8.00 ಲಕ್ಷ ರೂ. ಅನುದಾನವನ್ನು ಸರಕಾರ ಮಂಜೂರು ಮಾಡುತ್ತದೆ. ಸಿಬ್ಬಂದಿ ವೆಚ್ಚ, ನಿರ್ವಹಣಾ ವೆಚ್ಚ, ಔಷಧ ಕಟ್ಟಡ ಬಾಡಿಗೆ, ವೃತ್ತ ಪತ್ರಿಕೆ ಸೇರಿದಂತೆ ಇತರ ವೆಚ್ಚಗಳಿಗಾಗಿ ಯೋಜನೆಯ ವೆಚ್ಚದ ಶೇ. 90 ರಷ್ಟು ಅನುದಾನವನ್ನು ಸರಕಾರ ಭರಿಸಿದರೆ ಉಳಿದ ಶೇ. 10ರಷ್ಟನ್ನು ಸಂಸ್ಥೆಯೇ ಭರಿಸಬೇಕಾಗುತ್ತದೆ.
ಹಿರಿಯ ನಾಗರಿಕರ ಗುರುತಿನ ಚೀಟಿ:
ಗುರುತಿನ ಚೀಟಿಗಳನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ಇ-ಆಡಳಿತ ಇಲಾಖೆಯ “ಸೇವಾ ಸಿಂಧು” ಯೋಜನೆಯಡಿ ಆನ್-ಲೈನ್ ಮೂಲಕ ವಿತರಿಸಲಾಗುವುದು. ಆನ್-ಲೈನ್ ಶುಲ್ಕ ರೂ. 40/- ಅನ್ನು ಪೋರ್ಟಲ್ ನಲ್ಲಿ ಪಾವತಿಸಬೇಕು.
ಅಗತ್ಯ ದಾಖಲೆಗಳು
Ø ಪಾಸ್ ಪೋರ್ಟ್ ಅಳತೆಯ 1 ಭಾವಚಿತ್ರ
Ø ಜನ್ಮ ದಿನಾಂಕದ ಬಗ್ಗೆ ಪ್ರಮಾಣಪತ್ರ/ದಾಖಲೆ
Ø ಆಧಾರ್ ಕಾರ್ಡ್
Ø ರಕ್ತದ ಗುಂಪಿನ ವರ್ಗೀಕರಣ ವರದಿ
ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಕೆಯಾದ 21 ದಿನಗಳಲ್ಲಿ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸಿಕೊಡುವುದನ್ನು ಖಚಿತಪಡಿಸಿಕೊಳ್ಳುವ ಧ್ಯೇಯದಿಂದ ಕರ್ನಾಟಕ ರಾಜ್ಯವು ಹಿರಿಯ ನಾಗರಿಕರಿಗೆ ರಾಜ್ಯನೀತಿಯನ್ನು ರೂಪಿಸಿದ್ದು, ಗ್ರಾಮಾಂತರ ಮತ್ತು ನಗರ ಪ್ರದೇಶದ ಹಿರಿಯನಾಗರಿಕರಿಗೆ ಸಮಾನ ಅವಕಾಶ ಒದಗಿಸಿ ಅವರು ರಚನಾತ್ಮಕ, ಸುಭಿಕ್ಷ ಮತ್ತು ತೃಪ್ತಿಕರ ಜೀವನ ನಡೆಸಲು ಅವಕಾಶ ಕಲ್ಪಿಸುತ್ತದೆ.