ಉಡುಪಿ : ಹಿರಿಯ ನಾಗರಿಕರ ರಕ್ಷಣೆ, ಪಾಲನೆ ಮತ್ತು ಪೋಷಣೆ ಸಮಾಜದ ನೈತಿಕ ಜವಾಬ್ದಾರಿಯಾಗಿದೆ. ಅವರ ಆರ್ಥಿಕ, ಮಾನಸಿಕ ಹಾಗೂ ಮನೋವೈದ್ಯಕೀಯ ಅಗತ್ಯತೆಗಳು ಸೂಕ್ಷ್ಮವಾಗಿರುವುದರಿಂದ ಕಾನೂನುಗಳ ಅರಿವು ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಭಿಪ್ರಾಯಪಟ್ಟರು.

ನಗರದ ಬ್ರಹ್ಮಗಿರಿ ಬಾಲಭವನದಲ್ಲಿ ನಡೆದ ಹಿರಿಯ ನಾಗರಿಕರ ಕಾನೂನು ಅರಿವು ಮತ್ತು ನೆರವು ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ರಾಜ್ಯ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷತೆ ವಹಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಮಾತನಾಡಿ ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಬದುಕಿನ ಹಕ್ಕು ನೀಡಿದೆ. ಹಿರಿಯರ ಸಮಸ್ಯೆಗಳಿಗೆ ಕಾನೂನುಮಾರ್ಗದಲ್ಲಿ ಪರಿಹಾರ ಲಭ್ಯ ಎಂದರು. ಕಾರ್ಯಕ್ರಮದಲ್ಲಿ ಭಾನುಮತಿ ಎಂ ನಾಯರಿ, ನಿಲೇಶ್ ಸೈಬರ್ ವಂಚನೆ, ನಿರಂಜನ್ ಭಟ್ ಹಿರಿಯ ರಕ್ಷಣಾ ಕಾಯ್ದೆ-2007 ಹಾಗೂ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಹೆಚ್. ವಿಶ್ವನಾಥ ಹೆಗ್ಡೆ, ಹಿರಿಯ ನಾಗರಿಕರ ಸಂಘದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಸ್ತಾವಿಸಿದರು , ಉಡುಪಿ ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯಾ ಸ್ವಾಗತಿಸಿದರು, ಗಣನಾಥ ಶೆಟ್ಟಿ ಎಕ್ಕಾರು ನಿರೂಪಿಸಿದರು, ರತ್ನ ವಂದಿಸಿದರು.



