ಉಡುಪಿ: ಹಾವಂಜೆ ಗ್ರಾಮದ ಕೀಳಂಜೆ ರಿಂಗ್‌ರೋಡ್ ಬಳಿಯ ಪರಾರಿ ಪ್ರದೇಶದಲ್ಲಿ ಬಲು ಅಪರೂಪದ ಮೂಷಿಕ ಜಿಂಕೆ (ಮೌಸ್-ಡೀರ್) ಕಾಣಿಸಿಕೊಂಡ ಘಟನೆ ಗಮನಸೆಳೆದಿದೆ. ಸ್ಥಳೀಯವಾಗಿ ಈ ಪ್ರಾಣಿಯನ್ನು ಬರ್ಕ ಅಥವಾ ಬರಿಂಕ ಎಂದು ಕರೆಯಲಾಗುತ್ತದೆ.

ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳ ಬೆಟ್ಟು ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆ, ಕಾಂಗ್ರೆಸ್ ಮುಖಂಡ ಜಯ ಶೆಟ್ಟಿ ಅವರ ಮನೆಗೆ ಹೋಗುವ ದಾರಿಯಲ್ಲಿ ಈ ಅಪರೂಪದ ಪ್ರಾಣಿ ಏಕಾಏಕಿ ರಸ್ತೆ ಅಡ್ಡವಾಗಿ ದಾಟಿದ್ದು, ಅದನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದಾರೆ.

ಈ ಕುರಿತು ತಕ್ಷಣ ಅರಣ್ಯ ಪಾಲಕರಾದ ದೇವರಾಜ್ ಪಾಣರ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಇದು ಮೌಸ್-ಡೀರ್ (ಮೂಷಿಕ ಜಿಂಕೆ) ಎಂಬುದನ್ನು ದೃಢಪಡಿಸಿದ್ದಾರೆ. ನಂತರ ಯಾವುದೇ ಅಡಚಣೆ ಇಲ್ಲದೆ ಈ ಪ್ರಾಣಿ ಸುರಕ್ಷಿತವಾಗಿ ಸಮೀಪದ ಕಾಡಿನತ್ತ ಮರಳಿರುವುದು ತಿಳಿದುಬಂದಿದೆ.

ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಕಾಡು ಪ್ರದೇಶಗಳಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಈ ಸಣ್ಣ ಜಿಂಕೆ ಜಾತಿಯ ಪ್ರಾಣಿಯ ದರ್ಶನದಿಂದ ಸ್ಥಳೀಯರಲ್ಲಿ ಕುತೂಹಲ ಮೂಡಿದೆ.



