ಕುಂದಾಪುರ: ಕುಂದಾಪುರ ಮೂಡ್ಲ ಕಟ್ಟೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಒಂದನ್ನು ಹಾಡು ಹಗಲೇ ಎಲ್ಲರ ಕಣ್ಣ ಮುಂದೆ ಕಳವು ಮಾಡಿದ ಘಟನೆ ನಡೆದಿದೆ. ಯೋಗೇಶ್ ಪೂಜಾರಿ ಎನ್ನುವವರು ಕೆಲಸಕ್ಕೆ ಹೋಗುವ ಮೊದಲು ಮೂಡ್ಲುಕಟ್ಟೆ ರೈಲ್ವೆ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿ ತೆರಳಿದ್ದರು. ಸಂಜೆ ಕೆಲಸ ಮುಗಿಸಿ ವಾಪಸ್ ಬರುವಾಗ ಗಮನಿಸಿದರೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಾಣೆಯಾಗಿತ್ತು. ಬೈಕ್ ಕಾಣೆಯಾದ ಕುರಿತು ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿ, ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಧ್ಯಾಹ್ನ 11:00 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಸದ್ಯ ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಸಲುವಾಗಿ ಗುತ್ತಿಗೆ ಪಡೆದ ಗುತ್ತಿಗೆದಾರರು ಪ್ರತಿ ವಾಹನಕ್ಕೂ ಕೂಡ ಪಾರ್ಕಿಂಗ್ ಚಾರ್ಜ್ ವಿಧಿಸುತ್ತಾರೆ. ರೈಲ್ವೆ ನಿಲ್ದಾಣಕ್ಕೆ ಡ್ರಾಪ್ ಮಾಡಲು ಬರುವ ಪ್ರತಿಯೊಂದು ಖಾಸಗಿ ವಾಹನವನ್ನು ಕೂಡ ಟಾರ್ಗೆಟ್ ಮಾಡಿ ಪಾರ್ಕಿಂಗ್ ಚಾರ್ಜ್ ವಸೂಲಿಗೆ ನಿಲ್ಲುವ ಗುತ್ತಿಗೆದಾರರು ಈ ಘಟನೆ ನಡೆದಾಗ ಎಲ್ಲಿ ಮಾಯವಾಗಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆ. ಕುಂದಾಪುರ ಭಾಗದಿಂದ ಕಾರವಾರ, ಗೋವಾಕ್ಕೆ ತೆರಳುವ ಬಹುತೇಕ ಜನ ಮೂಡ್ಲುಕಟ್ಟೆ ರೈಲ್ವೆ ನಿಲ್ದಾಣದಲ್ಲಿಯೇ ತಮ್ಮ ವಾಹನವನ್ನು ಪಾರ್ಕ್ ಮಾಡಿ ತೆರಳುತ್ತಾರೆ. ಅದರಲ್ಲೂ ಪಾರ್ಕಿಂಗ್ ಚಾರ್ಜ್ ನೀಡಿ ವಾಹನವನ್ನು ಪಾರ್ಕ್ ಮಾಡುವ ಪ್ರಯಾಣಿಕರ ವಾಹನಕ್ಕೆ ಸೇಫ್ಟಿ ನೀಡಲಾಗದ ಇಂತಹ ಗುತ್ತಿಗೆ ನೀಡಬೇಕೆ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ. ಕೇವಲ ಪಾರ್ಕಿಂಗ್ ಚಾರ್ಜ್ ಸಂಗ್ರಹಿಸುವುದು ಮಾತ್ರ ನಮ್ಮ ಕೆಲಸ, ಪಾರ್ಕಿಂಗ್ ಚಾರ್ಜ್ ಸಂಗ್ರಹಿಸಿದ ಬಳಿಕ ಕಳ್ಳರು ಬಂದು ವಾಹನವನ್ನು ಕಣ್ಣೆದುರೇ ಕಳ್ಳತನ ಮಾಡಿದರು ನಾವು ಕೈಕಟ್ಟಿ ಕುಳಿತುಕೊಳ್ಳುತ್ತೇವೆ ಎನ್ನುವ ಇಂತಹ ಪಾರ್ಕಿಂಗ್ ಗುತ್ತಿಗೆಗಾರರಿಗೆ ಮುಂದೆ ಪಾರ್ಕಿಂಗ್ ಗುತ್ತಿಗೆ ನೀಡಬೇಕೆ ಎನ್ನುವುದನ್ನು ಕೊಂಕಣ ರೈಲ್ವೆ ಇಲಾಖೆ, ಒಮ್ಮೆ ಅವಲೋಕಿಸ ಬೇಕು ಎನ್ನುವುದು ಸ್ಥಳೀಯರ ಆಗ್ರಹ..