Monday, February 16, 2026

spot_img

ಹಳ್ಳಾಡಿ ಜಯರಾಮ ಶೆಟ್ಟರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರನ್ನು ಗುರುತಿಸಿ ಪುಂಡಲೀಕ ಹಾಲಂಬಿ ಪ್ರಶಸ್ತಿ ಪ್ರದಾನ ಮಾಡಿರುವುದು ನೈಜ ಸಾಧಕನಿಗೆ ಸಲ್ಲಿಸಿದ ಗೌರವವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದಲ್ಲಿ ಆಯೋಜಿಸಿದ್ದ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಧರ್ಮಪತ್ನಿ ಜಿ. ಸರೋಜಮ್ಮ ಪ್ರಾಯೋಜಿತ ಪುಂಡಲೀಕ ದತ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಹಳ್ಳಾಡಿ ಜಯರಾಮ ಶೆಟ್ಟಿಯಂತಹ ಹಿರಿಯ ಕಲಾವಿದರು ತಮ್ಮ ಕಲಾಪ್ರತಿಭೆಯಿಂದಲೇ ಬೆಳೆದು ಬಂದವರು. ಅವರಿಗೆ ಕಲೆಯೇ ಉಸಿರು. ಇಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವುದರಿಂದ ಸಂಸ್ಥೆಗಳ ಗೌರವವೂ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪುಂಡಲೀಕ ಹಾಲಂಬಿಯವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಉತ್ತಮ ಹಾಸ್ಯ ಕಲಾವಿದರಾಗಿರುವ ಹಳ್ಳಾಡಿ ಜಯರಾಮ ಶೆಟ್ಟರಿಗೆ ಈ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿಯ ಮೌಲ್ಯವೂ ಮತ್ತಷ್ಟು ಹೆಚ್ಚಾಗಿದೆ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಳ್ಳಾಡಿ ಜಯರಾಮ ಶೆಟ್ಟಿ, ಸುಮಾರು 50 ವರ್ಷಗಳ ಹಿಂದೆ 40 ಪೈಸೆಗೆ ಯಕ್ಷರಂಗದಲ್ಲಿ ದುಡಿಮೆ ಆರಂಭಿಸಿದ್ದ ನಾನು, ಇಂದು ಈ ಪ್ರಶಸ್ತಿಯ ಮೂಲಕ ಒಂದೇ ದಿನದಲ್ಲಿ 25 ಸಾವಿರ ರೂಪಾಯಿ ಗೌರವ ಪಡೆಯುವ ಮಟ್ಟಿಗೆ ಬೆಳೆಯಲು ಕಾರಣ ಯಕ್ಷಗಾನ ಅಭಿಮಾನಿಗಳೇ. ಈ ಗೌರವ ಸಂಪೂರ್ಣವಾಗಿ ಅವರಿಗೆ ಸಲ್ಲಬೇಕು” ಎಂದು ಭಾವುಕರಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಸ್ಥಾಪಕಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಿದರು. ಕಸಾಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಆಶಯ ನುಡಿಗಳನ್ನಾಡಿದರು. ಇದೇ ವೇಳೆ ಲೇಖಕ ಜಯಪ್ರಕಾಶ್ ಪುತ್ತೂರು ರಚಿಸಿದ ‘ವ್ಯಕ್ತಿತ್ವ ವಿಕಸನ ವಿಚಾರಧಾರೆ’ ಕೃತಿಯನ್ನು ಎ.ಎಸ್.ಎನ್. ಹೆಬ್ಬಾರ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ದತ್ತಿನಿಧಿ ದಾನಿ ಜಿ. ಸರೋಜಮ್ಮ, ಸಾಂಸ್ಕೃತಿಕ ಚಿಂತಕ ಕೆ. ಸೀತಾರಾಮ ನಕ್ಕತ್ತಾಯ, ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿ, ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪರಿಚಯಿಸಿದರು. ಮನೋಹರ ಪಿ. ಸ್ವಾಗತಿಸಿ, ಮಂಜುನಾಥ ಕೆ.ಎಸ್. ವಂದಿಸಿದರು. ದಿನಕರ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles