ಉಡುಪಿ: ಹಠಾತ್ ತೀವ್ರ ಬೆನ್ನು ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ದುರಂತವಾಗಿ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ. ಒಡಿಶಾ ಮೂಲದ ಎಂಐಟಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಕಾಂಕ್ಷಾ ಮೋಹಾಂತಿ (25) ಮೃತಪಟ್ಟ ವಿದ್ಯಾರ್ಥಿನಿ.

ನವೆಂಬರ್ 29ರ ರಾತ್ರಿ ಮಣಿಪಾಲದ ಒಂದು ಹೋಟೆಲ್ನಲ್ಲಿ ಊಟ ಮಾಡಿ ವಾಸ್ತವ್ಯದ ಕೊಠಡಿಗೆ ಹಿಂದಿರುಗಿದ ಆಕಾಂಕ್ಷಾಗೆ ಏಕಾಏಕಿ ಗಂಭೀರ ಸ್ವರೂಪದಲ್ಲಿ ಬೆನ್ನು ನೋವು ಪ್ರಾರಂಭವಾಯಿತು. ನೋವು ಅತಿಯಾದ ಪರಿಣಾಮ ನಡೆದಾಡಲೂ ಸಾಧ್ಯವಾಗದ ಸ್ಥಿತಿ ಉಂಟಾಗಿ, ಸ್ನೇಹಿತರು ತಕ್ಷಣ ಆಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು.

ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಆಕಾಂಕ್ಷಾ ಮೃತಪಟ್ಟಿದ್ದರು ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯರು ಮತ್ತು ಪೊಲೀಸ್ ವಲಯದಿಂದ ತಿಳಿದು ಬಂದಿದೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



