ಉಡುಪಿ : ದೇಶದ ಗಡಿಭಾಗದಲ್ಲಿ ಶತ್ರುರಾಷ್ಟ್ರಗಳ ಸವಾಲುಗಳನ್ನೆದುರಿಸಿ ಯುದ್ಧ ಸನ್ನದ್ಧಸ್ಥಿತಿಯಲ್ಲಿ ದಿಟ್ಟತನದಿಂದ ದೇಶವನ್ನು ಕಾಯುತ್ತಾ ಸೈನಿಕರ ಯೋಗಕ್ಷೇಮ ಮತ್ತು ದೇಶದ ಸುರಕ್ಷೆ ಸಮೃದ್ಧಿಗಾಗಿ ಪ್ರಾರ್ಥಿಸಿ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಂಕಲ್ಪನಾನುಸಾರ ಉಡುಪಿಯ ಪ್ರಾಚೀನ ಸ್ಕಂದಾಲಯ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ ಮಹಾಸುದರ್ಶನ ಮಂತ್ರ ಯಾಗ ನೆರವೇರಿತು . ವಿದ್ವಾನ್ ಕುಕ್ಕಿಕಟ್ಟೆ ರಾಮಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ವಿದ್ವಾನ್ ಸಗ್ರಿ ಆನಂದತೀರ್ಥಾಚಾರ್ಯರು, ವಿದ್ವಾನ್ ಲಕ್ಷ್ಮೀನಾರಾಯಣ ತಂತ್ರಿ ಮತ್ತು ವಿದ್ವಾನ್ ಕೆ ಜೆ ಪವನಕುಮಾರರು ಯಾಗವನ್ನು ನೆರವೇರಿಸಿದರು .
ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಶ್ರೀಗಳು ದೇವಸೇನಾಧಿಪತಿಯಾದ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿನಡೆಸಿದ ಈ ಯಾಗದ ಪೂರ್ಣ ಶ್ರೇಯಸ್ಸು ದೇಶದ ಗಡಿಕಾಯುವ ಸೈನಿಕರ ಶ್ರೇಯಸ್ಸಿಗಾಗಿ ಮತ್ತು ದೇಶದ ಸುರಕ್ಷತೆಗಾಗಿ ಅರ್ಪಿಸೋಣ . ಯಾವುದೇ ಉದ್ವಿಗ್ನ ಪರಿಸ್ಥಿತಿಯಲ್ಲೂ ಎದೆಗುಂದದೇ ದೇಶಕ್ಕೆ ಜಯ ತಂದುಕೊಂಡುವ ಅದ್ಭುತ ಶಕ್ತಿಯನ್ನು ಸೈನಿಕರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು . ವಿದ್ವಾಂಸರುಗಳಾದ ಡಾ ರಾಮನಾಥ ಆಚಾರ್ಯ , ಡಾ ಷಣ್ಮುಖ ಹೆಬ್ಬಾರ , ಮಠದ ಪ್ರಮುಖರಾದ ಸುಬ್ರಹ್ಮಣ್ಯ ಭಟ್ , ಶಾಸಕ ಯಶ್ಪಾಲ್ ಎ ಸುವರ್ಣ ಸೇರಿದಂತೆ ಮುನ್ನೂರಕ್ಕೂ ಅಧಿಕ ಮಂದಿ ಶ್ರೀಗಳ ಸೂಚನೆಯಂತೆ ಸೈನಿಕರ ಮತ್ತು ದೇಶದ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು .