ಉಡುಪಿ: ಕಲಾಪ್ರೇಮಿಗಳಿಗೆ, ಕಲಾ ಸಂಘಟನೆಗಳಿಗೆ ಕಲಾ ಪ್ರೇಮಿಗಳ ಪ್ರೋತ್ಸಾಹ ಅಗತ್ಯ ಎಂದು ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಶೆಟ್ಟಿ ಪ್ರತಿಪಾದಿಸಿದರು. ಅವರು ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ 13ನೇ ವರ್ಷದ ರಂಗಹಬ್ಬದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಶಿಸ್ತಿಗೆ ಮತ್ತೊಂದು ಹೆಸರು ಆಗಿರುವ ಸುಮನಸಾ ಸಂಘಟನೆ ನಮ್ಮ ನಗರ ಸಭೆ ವ್ಯಾಪ್ತಿಯಲ್ಲಿ ಇರುವುದು ಉಡುಪಿಗೆ ಹೆಮ್ಮೆ ಎಂದು ಶ್ಲಾಘಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ‘ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ ಕಟ್ಟುತ್ತಾ ಬೆಳೆಸುತ್ತಾ ಹೋಗುವುದು ಕಷ್ಟದ ಕೆಲಸ. ಸುಮನಸಾ ನಿರಂತರವಾಗಿ ರಂಗ ಚಟುವಟಿಕೆ ಜೊತೆಗೆ ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದೆ’ ಎಂದರು.
ನೂತನ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಮಹಾ ಪ್ರಭಂದಕ ಗಣೇಶ್ ಶೇರಿಗಾರ್ ಮಾತನಾಡಿ, ಸುಮಧುರ ಮನಸ್ಸಿನ ಸುಮನಸಿಗರು ತಮ್ಮ ಸಮಯ ಪಾಲನೆಯ ಶಿಸ್ತಿನ ಮೂಲಕ ಜನರನ್ನು ತಿದ್ದುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಮಣಿಪಾಲ ಎಚ್ ಪಿ ಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರಿಪ್ರಸಾದ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಿ ಕಲೆ, ಸಂಗೀತ ಇರುತ್ತದೋ ಅಲ್ಲಿ ಮನಸ್ಸುಗಳು ಸ್ವಚ್ಚವಾಗಿರುತ್ತವೆ ಎಂದು ಹೇಳಿದರು. ಎಂ. ಕೆ. ವಾಸುದೇವ ಅವರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ಉದ್ಯಮಿ ನಾಗರಾಜ್ ಸುವರ್ಣ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿದರು. ಮುರುಗೇಶ್ ವಂದಿಸಿದರು. ಗೀತಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕಲಾವಿದರು ‘ಗೊಂದಿ” ನಾಟಕ ಪ್ರದರ್ಶಿಸಿದರು.