ಉಡುಪಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಕುರಿತು ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಐಟಿ ಸೆಲ್ ನ ಪ್ರಖ್ಯಾತ್ ಬಿ.ಜೆ, ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ತಾಲೂಕಿನ ಈದು ಗ್ರಾಮದ ನಿವಾಸಿ ಪ್ರಖ್ಯಾತ್ ಬಿ.ಜೆ, ತನ್ನ ವಾಟ್ಸ್ಆಪ್, ಫೇಸ್ ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಸಿಎಂ ಸಿದ್ದರಾಮಯ್ಯ ಕುರಿತು ಸರಕಾರದ ಬೆಲೆ ಏರಿಕೆ ಬಿಸಿ ದೇವಸ್ಥಾನದ ಸೇವೆಗೂ ತಟ್ಟಿದೆ ಎಂದು ಸುಳ್ಳು ಸಂದೇಶ ಹಾಗೂ ಅವಹೇಳನಕಾರಿ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸಿ, ಸಮಾಜದ ಸ್ವಾಸ್ಥ ಕೆಡಿಸುತ್ತಿದ್ದಾನೆ. ಈ ಹಿಂದೆಯೂ ಈತ ಹಲವು ಬಾರಿ ರಾಷ್ಟ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಕುರಿತು ಅವಹೇಳನ ಪದಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಾ ಬಂದಿರುತ್ತಾನ. ಈ ಹಿಂದೆ ಈತನ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಕೂಡಲೇ ಆತನನ್ನು ವಿಚಾರಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕಾರ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ ದೂರಿನಲ್ಲಿ ತಿಳಿಸಿದ್ದಾರೆ.


