ಕೋಟ: ಯಕ್ಷಶಿಕ್ಷಣ ಟ್ರಸ್ಟ್, ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ 94 ಶಾಲೆಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಆಯೋಜಿಸಿರುವ ಕಿಶೋರ ಯಕ್ಷಗಾನ ಸಂಭ್ರಮ–2025 ಕಾರ್ಯಕ್ರಮದ ಅಂಗವಾಗಿ ಕುಂದಾಪುರ ಭಾಗದ ಎಂಟು ಶಾಲೆಗಳ ಯಕ್ಷಗಾನ ಪ್ರದರ್ಶನಗಳು ಶ್ರೀ ಗುರುನರಸಿಂಹ ದೇವಸ್ಥಾನದ ಸಹಯೋಗದಲ್ಲಿ ಆರಂಭಗೊಂಡಿತು.

ಶ್ರೀ ಗುರುನರಸಿಂಹ ದೇವಸ್ಥಾನದ ವಠಾರದ ವೇದಿಕೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಅವರು, ನಮ್ಮ ಪೂರ್ವಜರು ಬೆಳೆಸಿಕೊಂಡು ಬಂದ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಯಕ್ಷಶಿಕ್ಷಣ ಟ್ರಸ್ಟ್ ಸಮರ್ಥವಾಗಿ ನಿರ್ವಹಿಸುತ್ತಿದೆ. ಈ ಸಾಂಸ್ಕೃತಿಕ ಚಟುವಟಿಕೆಗಳಿಗೆ ದೇವಳದ ನೆರವು ನಿರಂತರವಾಗಿ ಮುಂದುವರಿಯಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದಾನಿ ಆನಂದ ಸಿ. ಕುಂದರ್ ಅವರು, ಇಂತಹ ಅತ್ಯುತ್ತಮ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗಕರ್ಮಿ ಜೀವನ್ ರಾಂ ಸುಳ್ಯ ಅವರು, ಇಷ್ಟೊಂದು ವಿಶಾಲ ಮಟ್ಟದ ಅಭಿಯಾನವನ್ನು ಶಿಸ್ತುಬದ್ಧವಾಗಿ ಸಂಘಟಿಸಿರುವ ಯಕ್ಷಗಾನ ಕಲಾರಂಗದ ಸಂಘಟನಾ ಶಕ್ತಿಗೆ ತಾನು ಬೆರಗಾಗಿದ್ದೇನೆ ಎಂದರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ರಾಜಶೇಖರ ಹೆಬ್ಬಾರ, ನಿವೃತ್ತ ಪ್ರಾಧ್ಯಾಪಕ ಉಪೇಂದ್ರ ಸೋಮಯಾಜಿ, ವಿಮರ್ಶಕ ಬೇಳೂರು ರಾಘವ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ವಾಸುದೇವ ಕಾರಂತ, ಎಂ. ಗಂಗಾಧರ ರಾವ್, ಎಸ್.ವಿ. ಭಟ್, ಯು.ಎಸ್. ರಾಜಗೋಪಾಲ ಆಚಾರ್ಯ ಸೇರಿದಂತೆ ಅನೇಕ ಗಣ್ಯರು ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ಸಂತೋಷಕುಮಾರ್ ಶೆಟ್ಟಿ, ಗಣೇಶ ಬ್ರಹ್ಮಾವರ, ಡಾ. ರಾಜೇಶ ನಾವಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಾರಾಯಣ ಎಂ. ಹೆಗಡೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

ಚೇತನಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ದಾಸ್ಯ ವಿಮೋಚನ ಹಾಗೂ ವಿವೇಕ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಗಿರಿಜಾ ಕಲ್ಯಾಣ ಯಕ್ಷಗಾನ ಪ್ರಸಂಗಗಳು ಸೊಗಸಾಗಿ ಪ್ರದರ್ಶಿತಗೊಂಡು ಪ್ರೇಕ್ಷಕರ ಮನಸೆಳೆದವು.



